ಹೊಸದಿಲ್ಲಿ: ಚೀನದಲ್ಲಿ ಮಂಗಳವಾರದಿಂದ ಆರಂಭ ವಾಗಲಿರುವ “ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್’ನಲ್ಲಿ ವಿಶ್ವದ ನಂ.1 ಭಜರಂಗ್ ಪೂನಿಯ, ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಭಾರತದ ಭರವಸೆಗಳಾಗಿ ಗೋಚರಿಸಿದ್ದಾರೆ. ವಿನೇಶ್ ಪೋಗಟ್ ಮೇಲೂ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ವಿನೇಶ್ ಪೋಗಟ್ ಇದೇ ಮೊದ ಲ ಬಾರಿಗೆ 53 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಈ ತೂಕ ವಿಭಾಗದಲ್ಲಿ ಬಲ್ಗೇರಿಯಾ ಸ್ಪರ್ಧೆಯಲ್ಲಿ ಸೆಣಸಿದ್ದ ವಿನೇಶ್ ಬೆಳ್ಳಿ ಪದಕ ಜಯಿಸಿದ್ದರು.
ಇದೇ ಕೂಟದಲ್ಲಿ ಸಾಕ್ಷಿ ಮಲಿಕ್ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಸಾಧನೆಗೈದಿದ್ದರು. ಆದರೆ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸಾಕ್ಷಿ 62 ಕೆಜಿ ವಿಭಾಗಕ್ಕೆ ಹಿಂದಿರುಗಿದ್ದಾರೆ. 65 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವವರು ನವಜೋತ್ ಕೌರ್. ಪೂಜಾ ಧಂಡಾ 57 ಕೆಜಿ ವಿಭಾಗದಲ್ಲಿ ಅದೃಷ್ಟಪರೀಕ್ಷೆಗೆ ಇಳಿದರೆ, ಏಶ್ಯಾಡ್ ಕಂಚು ವಿಜೇತೆ ದಿವ್ಯಾ ಕಕ್ರಾನ್ 68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಪುರುಷರ ವಿಭಾಗ
ಸುಶೀಲ್ ಕುಮಾರ್ ಗೈರಲ್ಲಿ ರಾಷ್ಟ್ರೀಯ ಚಾಂಪಿಯನ್ ಅಮಿತ್ ಧನ್‌ಕರ್ 74 ಕೆಜಿಯಲ್ಲಿ ಭಾರತವನ್ನು ಪ್ರತಿನಿಧಿಸುವರು. ಭಾರತ ತಂಡಕ್ಕೆ ಮರಳಿದ ಮಹಾರಾಷ್ಟ್ರದ ರಾಹುಲ್ ಅವಾರೆ 61 ಕೆಜಿ ವಿಭಾಗದಲ್ಲಿದ್ದಾರೆ. ಫ್ರೀಸ್ಟೈಲ್ ವಿಭಾಗದಲ್ಲಿ ಪ್ರವೀಣ್ ರಾಣಾ (79 ಕೆಜಿ), ಸತ್ಯಕುಮಾರ್ ಕದಿಯನ್ (97 ಕೆಜಿ) ಭಾರತದ ತಾರಾ ಕುಸ್ತಿಪಟುಗಳಾಗಿದ್ದಾರೆ.