ಕೌಲಾಲಂಪುರ: ಭಾರತದ ಜೋತ್ನಾ ಚಿನ್ನಪ್ಪ, ಸೌರವ್ ಘೋಷಾಲ್ ಏಶ್ಯನ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.
ರವಿವಾರ ರಾತ್ರಿ ನಡೆದ ಪುರುಷರ ಮತ್ತು ವನಿತಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸೌರವ್, ಜೋತ್ನಾ ಜಯಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ವನಿತಾ ಸಿಂಗಲ್ಸ್ ಪಂದ್ಯದಲ್ಲಿ 2ನೇ ಶ್ರೇಯಾಂಕಿತೆ ಜೋತ್ನಾ$Õ ಹಾಂಕಾಂಗ್‌ನ ಆ್ಯನಿ ಯು ವಿರುದ್ಧ 11-5, 8-11, 11-6, 11-6 ಗೇಮ್‌ಗಳಿಂದ ಗೆದ್ದು ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 2017ರಲ್ಲಿ ಜೋತ್ನಾ ಭಾರತದವರೇ ಆದ ದೀಪಿಕಾ ಪಳ್ಳಿಕಲ್ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಕಳೆದ ತಿಂಗಳು ನಡೆದ ಮಕಾವೊ ಓಪನ್ ಕೂಟದಲ್ಲಿ ಆ್ಯನಿ ನೇರ ಗೇಮ್‌ಗಳಿಂದ ಜೋತ್ನಾ ಅವರನ್ನು ಸೋಲಿಸಿದ್ದರು.
ಸೌರವ್‌ಗೆ ಚೊಚ್ಚಲ ಪ್ರಶಸ್ತಿ
ಪುರುಷರ ಸಿಂಗಲ್ಸ್‌ನ ಪ್ರಶಸ್ತಿ ಕಾದಾಟದಲ್ಲಿ ಅಗ್ರ ಶ್ರೇಯಾಂಕದ ಸೌರವ್ ಘೋಷಾಲ್ 2015ರ ಚಾಂಪಿಯನ್, 4ನೇ ಶ್ರೇಯಾಂಕದ ಹಾಂಕಾಂಗ್ ಆಟಗಾರ ಲಿಯೊ ಎಯು ಚುನ್ ಮಿಂಗ್ ವಿರುದ್ಧ 11-9, 11-2, 11-8 ನೇರ ಗೇಮ್‌ಗಳಿಂದ ಗೆದ್ದರು. ಕಳೆದ ವರ್ಷ ಸೌರವ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿ ರನ್ನರ್ ಅಪ್ ಆಗಿದ್ದರು.