ವೈರಿಗಳನ್ನು ಹೆದರಿಸುವ ನೈಪುಣ್ಯ ಸಹ ಈ ಹಕ್ಕಿಗೆ ಇದೆ.ASIAN PIED Starling – (Sturnus contra ) R Myna +, — ಮಾವು-ಆಲ ಇತ್ಯಾದಿ ಮರಗಳನ್ನು ಆರಿಸಿಕೊಂಡು, ಸುಮಾರು 5 ರಿಂದ 10 ಮೀ. ಎತ್ತರದ ಟೊಂಗೆ ಮೇಲೆ ನಾರು, ಬೇರು, ಎಲೆ, ಹುಲ್ಲು ಇತ್ಯಾದಿ ಉಪಯೋಗಿಸಿ ವರ್ತುಲಾಕಾರದಲ್ಲಿ ಗೂಡನ್ನು ನಿರ್ಮಿಸುತ್ತದೆ. ಕೆಲವೊಮ್ಮೆ ಬೇರೆ ಹಕ್ಕಿಗಳು ಬಳಸಿದ ಗೂಡನ್ನೂ ತನ್ನ ಗೂಡು ಮಾಡಲು ಉಪಯೋಗಿಸುವುದಿದೆ. ಒಂದೇ ಮರದಲ್ಲಿ 4-5 ಗೂಡು ಕಟ್ಟಿರುವ ಉದಾಹರಣೆಗಳೂ ಇವೆ.
ಈ ಹಕ್ಕಿಗೆ ಕನ್ನಡದಲ್ಲಿ ಬಿಳಿ ಮೈನಾ, ಭಾರತದ ಬಿಳಿ ಮಚ್ಚೆಯ ಮೈನಾ ಎಂಬ ಹೆಸರು ಸಹ ಇದೆ. ಇದು ಸ್ಟರ್ನಿಡಿಯಾ ಕುಟುಂಬಕ್ಕೆ ಸೇರಿದ ಹಕ್ಕಿ. ಮೈನಾ ಹಕ್ಕಿಗಿಂತ ಕೊಂಚ ಚಿಕ್ಕದಿರುತ್ತದೆ. ಎದೆ ಭಾಗವು ಕೆಂಪು ಮಿಶ್ರಿತ ಬಿಳಿಬಣ್ಣದಿಂದ ಕೂಡಿದೆ. ತಲೆ, ಬೆನ್ನು, ರೆಕ್ಕೆ, ಕುತ್ತಿಗೆ ಭಾಗ ಹಾಗೂ ಬಾಲದ ಪುಕ್ಕ ಕಪ್ಪು ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಯ ಮೇಲಿನ ಬಣ್ಣ ಅಚ್ಚ ಬಿಳಿ. ಕುಳಿತಾಗಲೂ ಹಾರುವಾಲೂ ಈ ಬಣ್ಣ ಸ್ಪಷ್ಟವಾಗಿ ಕಾಣುತ್ತದೆ. ಮೈ, ಕಪ್ಪು- ಬಿಳುಪು ಮಾರ್ಕ್‌ನಿಂದ ಕೂಡಿದೆ. ಚುಂಚಿನ ಬುಡದಲ್ಲಿ ಕೆಂಪು ಬಣ್ಣ ಇದ್ದು, ಚುಂಚಿನ ಉಳಿದ ಭಾಗ ಹಳದಿ ಇದೆ. ಕಣ್ಣಿನ ಸುತ್ತ, ಗರಿಗಳಿಲ್ಲದ ಕೆಂಪು ಚರ್ಮವಿದೆ. ಚುಂಚಿನ ಬುಡದಿಂದ ಕುತ್ತಿಗೆ ವರೆಗೆ ಬಿಳಿ ಬಣ್ಣ ನಾಮದಂತಿದೆ. ಇದರ ಅಗಲ ಮತ್ತು ಉದ್ದ, ವರ್ತುಲವನ್ನು ಆದರಿಸಿಯೇ ಮೂರು ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಇದರ ಕಾಲು ದೃಢವಾಗಿರುವುದರಿಂದ ನೆಲದಲ್ಲಿ ಓಡಾಡಿ, ಕೆಲವೊಮ್ಮೆ ಹಸುಗಳು ಓಡಾಡುವಾಗ ಅದರ ಗೊರಸಿನಿಂದ ಚಿಮ್ಮುವ ಹುಲ್ಲು ಮಿಡತೆ ಮತ್ತು ರೆಕ್ಕೆ ಹುಳಗಳನ್ನು ಹಿಡಿದು ತಿನ್ನುತ್ತದೆ. ಇಂತಹ ಸಂದರ್ಭದಲ್ಲಿ ಇದು ಸಾಮನ್ಯ ಮೈನಾಗಳ ಸಹವರ್ತಿಯಾಗಿರುತ್ತದೆ.
ಪ್ರಾಯಕ್ಕೆ ಬರದಿರುವಾಗ ಇದರ ಮೈ ಬಣ್ಣ ಕಪ್ಪಾಗಿರದೆ ಕಂದು ಮಸುಕಿನ ಬಣ್ಣದಿಂದ ಕೂಡಿರುತ್ತದೆ. ಮಧ್ಯ ಬಿಳಿಬಣ್ಣವೂ ಇರುತ್ತದೆ.
ಈ ಪ್ರಬೇಧದ ಹಕ್ಕಿಗಳು ಭಾರತದಲ್ಲಿ ಹೆಚ್ಚಾಗಿದೆ. ಗಂಡು-ಹೆಣ್ಣು ಹಕ್ಕಿಗಳು ನೋಡಲು ಒಂದೇ ರೀತಿ ಇರುತ್ತವೆ. ಚಿಕ್ಕ ಹಕ್ಕಿಯಲ್ಲಿ ಬೆನ್ನಿನ ಬಣ್ಣ, ರೆಕ್ಕೆ ಪುಕ್ಕ ಕಂದುಗಪ್ಪು ಬಣ್ಣದಿಂದ ಕೂಡಿರುತ್ತದೆ. ಇದು ಪ್ರಾಯಾವಸ್ಥೆಗೆ ಬಂದಂತೆಲ್ಲ ಕಪ್ಪಾಗುತ್ತದೆ. ಇದಕ್ಕೆ ಕಾರಣವೇನು? ಇದರಿಂದ ಈ ಹಕ್ಕಿಗೆ ಏನು ಉಪಯೋಗ? ಹೀಗೆ ಬಣ್ಣ ಬದಲಾಗಲು ಇದರ ದೇಹದಲ್ಲಿ ಉತ್ಪನ್ನವಾಗುವ ಹಾರ್ಮೋನ್ ಕಾರಣವೇ? ಈ ಬಗ್ಗೆ ಅಧ್ಯಯನ ನಡೆಯಬೇಕಿದೆ.
ಹಸಿರ ಬೈಲಿನಲ್ಲಿ ಹಸುಗಳನ್ನು, ಕುರಿಗಳನ್ನು ಹಿಂಬಾಲಿಸುತ್ತಾ, ಅದರ ಅಗಲವಾದ ಗೊರಸಿನಿಂದ ಚಿಮ್ಮುವ ಹುಲ್ಲು ಮಿಡತೆ, ಚಿಟ್ಟೆಗಳನ್ನು ತಿನ್ನುತ್ತಿರುತ್ತಾದೆ. ಮೈನಾ ಹಕ್ಕಿಯ ಕಣ್ಣಿನ ಸುತ್ತ ಇರುವ ಕೆಂಪು ಹಳದಿ, ಇಲ್ಲವೇ ಕಂದು ಮೈ ಬಣ್ಣವನ್ನು ಆಧರಿಸಿಯೇ ಇವುಗಳನ್ನು ಮೈನಾ ಮತ್ತು ಸಾರಿಕಾ ಹಕ್ಕಿ ಎಂದು ಪ್ರತ್ಯೇಕಿಸಲಾಗುತ್ತದೆ.
ಸಾರಿಕಾ ಹಕ್ಕಿ ಅತಿ ಸುಂದರ. ಅಲ್ಲದೇ, ವಿಶಿಷ್ಟವಾದ ಅನುಕರಣೆ ದನಿ ಹೊಂದಿದೆ. ಕೆಲವೊಮ್ಮೆ ಕೆಲಸ ಜೇನಿನ ಹುಳದ ದನಿಯಾಗಿಯೂ, ಕೊಳಲ ನಿನಾದವಾಗಿಯೂ ಕೇಳಿದರೆ ಆಶ್ಚರ್ಯಪಡಬೇಕಿಲ್ಲ.
ಇದು ಗುಂಪಿನಲ್ಲಿ ವಾಸಿಸುವ ಹಕ್ಕಿ. ಸಾಮೂಹಿಕವಾಗಿ ಗೂಡು ಕಟ್ಟುತ್ತದೆ. ಹೀಗಿದ್ದರೂ ಗಂಡು- ಹೆಣ್ಣು ಸಂಗಾತಿಯ ಜೊತೆ ಸಂಭಾಳಿಸುವಾಗ ದನಿಯಲ್ಲಿಯ ಪ್ರತ್ಯೇಕತೆ ಉಳಿಸಿಕೊಳ್ಳುವುದು ವಿಶೇಷ.
ಜನ ವಸತಿ ಪ್ರದೇಶದಲ್ಲಿ ಇವು ಕಾಣುವುದು ಕಡಿಮೆ. ಮೈನಾ ಹಕ್ಕಿಗಳಂತೆ ಮನೆಗಳ ಸುತ್ತಮುತ್ತ ಬರುವುದಿಲ್ಲ. ಹುಲ್ಲುಗಾವಲು, ನಾಲೆ ಮತ್ತು ಅದರ ಸಮೀಪ ನೀರು ಹರಿಯುವ ಜಾಗ, ಕಾಳು, ದವಸ ಧಾನ್ಯ ಬೆಳೆವ ಪ್ರದೇಶ ಇವುಗಳಿಗೆ ಪ್ರಿಯವಾದ ಸ್ಥಳಗಳು. ಕೆಲವೊಮ್ಮೆ ಬೆಳೆದು ನಿಂತ ಪೈರುಗಳಿಗೆ ನುಗ್ಗಿ ಹಾನಿಮಾಡುವುದೂ ಇದೆ. ಆದರೂ ಹುಳ ಮತ್ತು ಬೆಳೆಗಳಿಗೆ ಹಾನಿ ಮಾಡುವ ಹುಳಗಳ ಮೊಟ್ಟೆ ಮತ್ತು ಹುಳಗಳನ್ನು, ಚಿಟ್ಟಗಳನ್ನು ಪತಂಗಗಳನ್ನೂ ನಿಯಂತ್ರಿಸುವುದರಿಂದ ರೈತರೂ ಸಹ ಇವುಗಳ ಉಪಟಳ ಸಹಿಸಿಕೊಳ್ಳುತ್ತಾರೆ.
ಚಿಕ್ಕ ದೊಡ್ಡ ಗುಂಪಿನಲ್ಲಿ ಇತರ ಮೈನಾಗಳ ಸಹವರ್ತಿಯಾಗಿ ಆಹಾರ ತಿನ್ನುತ್ತಾ, ನೆಲದಲ್ಲಿ ಓಡಾಡುತ್ತಾ ಇಲ್ಲವೇ ಕೆಲವೊಮ್ಮೆ ಮರಗಳ ತುದಿಯಲ್ಲೂ ಕುಳಿತಿರುತ್ತದೆ.
ವೈರಿಗಳನ್ನು ಹೆದರಿಸುವ ನೈಪುಣ್ಯ ಸಹ ಈ ಹಕ್ಕಿಗೆ ಇದೆ. ಮಾವು-ಆಲ ಇತ್ಯಾದಿ ಮರಗಳನ್ನು ಆರಿಸಿಕೊಂಡು, ಸುಮಾರು 5 ರಿಂದ 10 ಮೀ. ಎತ್ತರದ ಟೊಂಗೆ ಮೇಲೆ ನಾರು, ಬೇರು, ಎಲೆ, ಹುಲ್ಲು ಇತ್ಯಾದಿ ಉಪಯೋಗಿಸಿ ವರ್ತುಲಾಕಾರದಲ್ಲಿ ಗೂಡನ್ನು ನಿರ್ಮಿಸುತ್ತದೆ. ಕೆಲವೊಮ್ಮೆ ಬೇರೆ ಹಕ್ಕಿಗಳು ಬಳಸಿದ ಗೂಡನ್ನೂ ತನ್ನ ಗೂಡು ಮಾಡಲು ಉಪಯೋಗಿಸುವುದಿದೆ. ಒಂದೇ ಮರದಲ್ಲಿ 4-5 ಗೂಡು ಕಟ್ಟಿರುವ ಉದಾಹರಣೆಗಳೂ ಇವೆ.
ಪಿ. ವಿ. ಭಟ್ ಮೂರೂರು