ಡೋಂಗೆ (ದಕ್ಷಿಣ ಕೊರಿಯ): ಭಾರತ ಮಹಿಳಾ ತಂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದಲ್ಲಿ ಭರ್ಜರಿ ಆರಂಭ ಮಾಡಿದೆ. ರವಿವಾರದ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 13-0 ಅಂತರದಿಂದ ಮಣಿಸಿದೆ.
ಗೋಲ್‌ಕೀಪರ್ ಸವಿತಾ ಪುನಿಯ ನೇತೃತ್ವದ ಭಾರತ ಟೋಕಿಯೊ ಒಲಿಂಪಿಕ್ಸ್ ಬಳಿಕ ಆಡಿದ ಮೊದಲ ಪಂದ್ಯ ಇದಾಗಿತ್ತು. ಪಂದ್ಯದ ಮೊದಲ ನಿಮಿಷದಿಂದಲೇ ಪ್ರಾಬಲ್ಯ ಮೆರೆಯಿತು. ಥಾಯ್ಲೆಂಡ್‌ಗೆ ಉಸಿರು ಬಿಡಲಿಕ್ಕೂ ಸಮಯಾವಕಾಶ ನೀಡದಂತೆ ಗೋಲು ಸಿಡಿಸುತ್ತ ಸಾಗಿದರು.
ಡ್ರ್ಯಾಗ್‌ಫ್ಲಿಕರ್ ಗುರ್ಜಿತ್ ಕೌರ್ 5 ಗೋಲು ಬಾರಿಸಿ ಮಿಂಚಿದರು. ದ್ವಿತೀಯ ನಿಮಿಷದಲ್ಲೇ ಅವರು ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿದರು. 5 ನಿಮಿಷಗಳ ಬಳಿಕ ವಂದನಾ ಕಟಾರಿಯಾ ಎರಡನೇ ಗೋಲು ಹೊಡೆದರು. ಲಿಲಿಮಾ ಮಿಂಜ್ 14ನೇ ನಿಮಿಷದಲ್ಲಿ 3ನೇ ಗೋಲು ಗಳಿಸಿದರೆ ಗುರ್ಜಿತ್ ಮತ್ತು ಜ್ಯೋತಿ 14ನೇ ಹಾಗೂ 15ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಮುನ್ನಡೆಯನ್ನು 5-0ಗೆ ಏರಿಸಿದರು.
ಎರಡನೇ ಕ್ವಾರ್ಟರ್‌ನಲ್ಲೂ ಭಾರತ ಪ್ರಾಬಲ್ಯ ಮುಂದುವರಿಸಿತು. ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ರಾಜ್ವಿಂದರ್ ಕೌರ್ 16ನೇ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸಿದರೆ, ಗುರ್ಜಿತ್ 24ನೇ ನಿಮಿಷದಲ್ಲಿ ತಮ್ಮ 3ನೇ ಗೋಲು ಹೊಡೆದರು. ಇದಾದ ಕೆಲವೇ ನಿಮಿಷಗಳಲ್ಲಿ ಲಿಲಿಮಾ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?
9-0 ಮುನ್ನಡೆ
ಅರ್ಧ ಹಾದಿ ಕ್ರಮಿಸುವಾಗ ಭಾರತ 9-0 ಮುನ್ನಡೆ ಸಾಧಿಸಿತ್ತು. ಆದರೆ ಭಾರತದ ಗೋಲು ಗಳಿಕೆ ಇಲ್ಲಿಗೇ ನಿಲ್ಲಲಿಲ್ಲ. 36ನೇ ನಿಮಿಷದಲ್ಲಿ ಜ್ಯೋತಿ, 43ನೇ ನಿಮಿಷದಲ್ಲಿ ಸೋನಿಕಾ ಥಾಯ್ ಆಟಗಾರ್ತಿಯರನ್ನು ವಂಚಿಸಿ ಚೆಂಡನ್ನು ಗೋಲುಪಟ್ಟಿಗೆಗೆ ತಳ್ಳಿದರು. 4ನೇ ಕ್ವಾರ್ಟರ್‌ನಲ್ಲಿಯೂ ದಾಳಿ ಮುನ್ನಡೆಸಿದ ಭಾರತದ ವನಿತೆಯರು ಎರಡು ಗೋಲು ಬಾರಿಸಿ 13-0 ಅಂತರದಿಂದ ಗೆದ್ದು ಬೀಗಿದರು.