ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಮಂಗಳವಾರ ಸೈಲಿಂಗ್ ರೂಪದಲ್ಲಿ ಮೊದಲ ಪದಕ ಭಾರತಕ್ಕೆ ಒಲಿದಿದೆ.
ಬಾಲಕಿಯರ ಡಿಂಗಿ ಐಎಲ್‌ಸಿಎ4 ಸ್ಪರ್ಧೆಯಲ್ಲಿ ಭಾರತದ ನೇಹಾ ಠಾಕೂರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಸೈಲಿಂಗ್ ನಲ್ಲಿ ಭಾರತಕ್ಕೆ ಬಂದ ಮೊದಲ ಪದಕವಾಗಿದೆ. ಒಟ್ಟಾರೆ 19ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಬಾಲಕಿಯರ ಡಿಂಗಿ ILCA4 ಓಟದ ಒಂಬತ್ತರಲ್ಲಿ ಮೂರನೇ ಸ್ಥಾನ ಪಡೆದ ಠಾಕೂರ್, 10 ನೇ ಓಟದಲ್ಲಿ ಒಂದು ಸ್ಥಾನವನ್ನು ಸುಧಾರಿಸಿದರು. ಅರ್ಹತಾ ಹಂತದಲ್ಲಿ 24:48 ರ ಒಟ್ಟಾರೆ ಸಮಯದೊಂದಿಗೆ ಎರಡನೇ ಸ್ಥಾನವನ್ನು ಪಡೆದರು.
ಕೇಂದ್ರ ಸಚಿವ ಕಿರೆಣ್ ರಿಜುಜು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನೇಹಾ ಠಾಕೂರ್ ಅವರನ್ನು ಅಭಿನಂದಿಸಿದ್ದಾರೆ. “ಬಾಲಕಿಯರ ಡಿಂಗಿ – ILCA 4 ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನೇಹಾ ಠಾಕೂರ್ ಅವರು ಅದ್ಭುತ ಪ್ರದರ್ಶನ ತೋರಿಸಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಇದು ಸೇಲಿಂಗ್‌ನಲ್ಲಿ ಭಾರತಕ್ಕೆ 1ನೇ ಪದಕವಾಗಿರುವುದರಿಂದ ಉತ್ತಮ ಆರಂಭವಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ.