ಹೊಸದಿಲ್ಲಿ: ಹಾಕಿ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಏಷ್ಯನ್ ಗೇಮ್ಸ್ ಉದ್ಘಾಟನ ಸಮಾ ರಂಭದಲ್ಲಿ ಭಾರತದ ಜಂಟಿ ಧ್ವಜಧಾರಿಗಳ ಗೌರವ ಪಡೆದಿದ್ದಾರೆ. ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಬುಧವಾರ ಇದನ್ನು ಪ್ರಕಟಿಸಿತು.
“ನಾವು ಈ ಬಾರಿ ಇಬ್ಬರು ಧ್ವಜಧಾರಿಗಳನ್ನು ಆರಿಸಿದ್ದೇವೆ. ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಈ ಗೌರವ ಸಂಪಾದಿಸಿದ್ದಾರೆ’ ಎಂಬುದಾಗಿ ಭಾರತೀಯ ನಿಯೋಗದ ಚೆಫ್ ಡಿ ಮಿಷನ್ ಭೂಪೇಂದರ್ ಸಿಂಗ್ ಬಾಜ್ವಾ ತಿಳಿಸಿದರು. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದ್ದರು.
ಹರ್ಮನ್‌ಪ್ರೀತ್ ಸಿಂಗ್ ಅತ್ಯುತ್ತಮ ಡ್ರ್ಯಾಗ್ ಫ್ಲಿಕರ್ ಆಗಿದ್ದು, ಇವರ ನಾಯಕತ್ವದಲ್ಲಿ ಭಾರತ ಟೋಕಿಯೊದಲ್ಲಿ ಕಂಚು ಗೆದ್ದು ಒಲಿಂಪಿಕ್ಸ್ ಪದಕದ ಬರಗಾಲವನ್ನು ನೀಗಿಸಿ ಕೊಂಡಿತ್ತು. ಹಾಂಗ್‌ಝೂ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದರೆ ಭಾರತೀಯ ಹಾಕಿ ತಂಡ ನೇರವಾಗಿ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಲಿದೆ.
ಲವ್ಲಿನಾ ಬೊರ್ಗೊಹೇನ್ ಟೋಕಿಯೊ ಒಲಿಂಪಿಕ್ಸ್‌ನ 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ವರ್ಷದ ವಿಶ್ವ ವನಿತಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 75 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಕೂಡ ಲವ್ಲಿನಾ ಅವರದಾಗಿದೆ.
ಸೆ. 23ರಂದು ಉದ್ಘಾಟನ ಸಮಾರಂಭ ನಡೆಯ ಲಿದ್ದು, ಭಾರತದ 655 ಕ್ರೀಡಾಪಟುಗಳು ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇದು ಏಷ್ಯಾಡ್ ಇತಿಹಾಸದಲ್ಲೇ ಭಾರತದ ಗರಿಷ್ಠ ಸಂಖ್ಯೆಯ ಕ್ರೀಡಾಳುಗಳ ದಾಖಲೆಯಾಗಿದೆ.