Advertisement
ಉದ್ಘಾಟನಾ ಸಮಾರಂಭವೊಂದು ಇತ್ತೀಚೆಗಿನ 15 ವರ್ಷಗಳಲ್ಲಿ ಇಷ್ಟು ಅದ್ಭುತವಾಗಿ ಮೂಡಿಬಂದದ್ದು ಇದೇ ಮೊದಲೆಂದು ಹೇಳಲು ಯಾವುದೇ ಅಡ್ಡಿಯಿಲ್ಲ. ಅದರಲ್ಲೂ ಇಂಡೋನೇಶ್ಯದಂತಹ ಸಾಮಾನ್ಯ ರಾಷ್ಟ್ರವೊಂದು ಮಾಡಿದ ಈ ಸಾಹಸ ಒಲಿಂಪಿಕ್ಸ್ ಆತಿಥ್ಯ ವಹಿಸುವ ರಾಷ್ಟ್ರಗಳಿಗೂ ಮಾದರಿ!
ಪಥ ಸಂಚಲನದ ಆರಂಭದಲ್ಲಿ ಕಾಣಿಸಿಕೊಂಡಿದ್ದು ಅಫ್ಘಾನಿಸ್ಥಾನ ತಂಡ. ಅಂತಿಮವಾಗಿ ಕಾಣಿಸಿಕೊಂಡಿದ್ದು ಆತಿಥೇಯ ಇಂಡೋನೇಶ್ಯ. ಕೆಂಪು ಬ್ಲೇಜರ್‌ಗಳನ್ನು ಧರಿಸಿ ಇಂಡೋನೇಶ್ಯ ಸ್ಪರ್ಧಿಗಳು ವೇದಿಕೆ ಪ್ರವೇಶಿಸಿದಾಗ ಸಹಜವಾಗಿ ಭಾರೀ ಚಪ್ಪಾಳೆ ಬಿತ್ತು. ದಕ್ಷಿಣ ಕೊರಿಯ ಮತ್ತು ಉತ್ತರ ಕೊರಿಯ ಜಂಟಿಯಾಗಿ ಮೆರವಣಿಗೆ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾದ ಅಂಶ. ಈ ಎರಡು ದೇಶಗಳು ಕೆಲವು ಸ್ಪರ್ಧೆಗಳಲ್ಲಿ ಒಂದಾಗಿ ಸೆಣಸಲಿವೆ.
Related Articles
ಇಡೀ ಕಾರ್ಯಕ್ರಮವನ್ನು ಹುಚ್ಚೆಬ್ಬಿಸಿದ್ದು ಅತ್ಯಂತ ಸೃಜನಶೀಲವಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ. 4,000 ಕಲಾವಿದರು ಕಾರ್ಯಕ್ರಮವನ್ನು ರೂಪಿಸಿದರು. ಕಾರ್ಯಕ್ರಮದ ಮೊದಲ ರೂಪಕ ನೀರನ್ನು ಪ್ರತಿನಿಧಿಸಿತ್ತು. ಇದು ನೂರಾರು ವರ್ಷಗಳ ಹಿಂದೆ ಸಮುದ್ರದ ನೀರನ್ನು ಅವಲಂಬಿಸಿದ್ದ ಇಂಡೋನೇಶ್ಯದ ಇತಿಹಾಸದ ಪ್ರತೀಕ. ಅನಂತರ ಸಮುದ್ರ ಮಾಯವಾಯಿತು. ವೇದಿಕೆಯ ಕೇಂದ್ರಭಾಗದಲ್ಲಿ ಬರೀ ಬೆಳಕೇ ತುಂಬಿಕೊಂಡಿತು. ಮತ್ತೂಂದು ಕಡೆ ಹಸಿರುಮಯವಾಯಿತು. ಇದು ಭೂಮಿ ಮತ್ತು ಜತನವಾಗಿ ಕಾಪಾಡಿಕೊಳ್ಳಲಾಗಿರುವ ಇಂಡೋನೇಶ್ಯ ಸಂಸ್ಕೃತಿಯ ಮಹತ್ವವನ್ನು ತೋರುತ್ತಿದ್ದವು.
Advertisement
ಜ್ವಾಲಾಮುಖೀಯಲ್ಲಿ ಜ್ಯೋತಿಯಾತ್ರೆ ಸಮಾಪ್ತಿಈ ಬಾರಿಯ ಕ್ರೀಡಾ ಜ್ಯೋತಿಯಾತ್ರೆ ಬಹಳ ವಿಶೇಷವಾಗಿತ್ತು. ಹಲವಾರು ಆ್ಯತ್ಲೀಟ್‌ಗಳ ಕೈ ಬದಲಾಯಿಸಿಕೊಳ್ಳುತ್ತ ಜ್ಯೋತಿ ಮುಂದುವರಿಯಿತು. ಅಂತಿಮವಾಗಿ ಕ್ರೀಡಾಪಟುವೋರ್ವ ಕೃತಕವಾಗಿ ನಿರ್ಮಿಸಿದ್ದ ಜ್ವಾಲಾಮುಖೀ ಪರ್ವತವೊಂದರ ತುದಿಗೆ ಜ್ಯೋತಿಯೊಂದಿಗೆ ನಡೆದು ತಲುಪಿದರು. ಈ ನಡೆಯುವ ಜಾಗವನ್ನು ನಿಸರ್ಗ ಸಹಜವಾಗಿ ಕಡಿದಾದ ಪರ್ವತ ಹತ್ತುವ ದಾರಿಯಂತೆಯೇ ನಿರ್ಮಿಸಲಾಗಿತ್ತು. ಅಂತಿಮವಾಗಿ ಪರ್ವತದ ತುದಿಯಲ್ಲಿ ಸ್ಥಾಪಿಸಲಾಗಿದ್ದ ಕೂಟದ ಜ್ಯೋತಿಗೆ ಮೆರವಣಿಗೆಯಲ್ಲಿ ತಂದಿದ್ದ ಜ್ಯೋತಿಯನ್ನು ಸ್ಪರ್ಶಿಸಲಾಯಿತು. ಅದು ಭಗ್ಗನೆ ಹತ್ತಿ ಉರಿದಾಗ ಇಡೀ ಮೈದಾನದಲ್ಲಿ ಅತ್ಯದ್ಭುತ ಬೆಳಕಿನಾಟವೊಂದು ತೆರೆದುಕೊಂಡಿತು. ಇಡೀ ಮೈದಾನ ಜ್ಯೋತಿರ್ಮಯವಾಯಿತು. ಬೈಕ್ ಸವಾರಿ ಮಾಡಿದ ಇಂಡೋನೇಶ್ಯ ಅಧ್ಯಕ್ಷ
ಉದ್ಘಾಟನಾ ಸಮಾರಂಭದ ಕಾರ್ಯಕ್ರಮಗಳು ಆರಂಭವಾಗಿದ್ದು ಇಂಡೋನೇಶ್ಯ ಅಧ್ಯಕ್ಷ ಜೊಕೊ ವಿಡೋಡೊ ಅವರ ಬೈಕ್ ಸವಾರಿಯ ವೀಡಿಯೋದೊಂದಿಗೆ. ಆ ವೇಳೆ ಅವರು ಜಕಾರ್ತಾ ಬೀದಿ ಬೀದಿಗಳನ್ನು ಸುತ್ತಿ ಹಲವು ಸಾಹಸಗಳನ್ನು ಮಾಡಿದರು. ಅದೇ ಹಂತದಲ್ಲಿ ಮೂವರು ಮಕ್ಕಳನ್ನು ರಕ್ಷಿಸುವ ಮಾನವೀಯತೆಯನ್ನೂ ತೋರಿದರು. ಇದು ಕೂಟದ ಪ್ರಚಾರಕ್ಕೆ ಸಂಘಟಕರು ಮಾಡಿದ ವೀಡಿಯೋ ದೃಶ್ಯಾವಳಿಯಾಗಿತ್ತು. ನೀರಜ್ ಚೋಪ್ರಾ ಭಾರತದ ಸಾರಥಿ
ಭಾರತ ತಂಡವನ್ನು ಪ್ರತಿಭಾವಂತ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದರು. ಭಾರತದ 804 ಮಂದಿ ಬೃಹತ್ ತಂಡದಲ್ಲಿ 572 ಮಂದಿ ಸ್ಪರ್ಧಿಗಳಿದ್ದಾರೆ. ವೇದಿಕೆಯೇ ಒಂದು ಪರ್ವತ
ಉದ್ಘಾಟನಾ ಸಮಾರಂಭಕ್ಕೆ ಅದ್ಭುತ ವೇದಿಕೆ ಸೃಷ್ಟಿಸಲಾಗಿತ್ತು. ವೇದಿಕೆಯನ್ನು ಪರ್ವತವನ್ನಾಗಿ ರೂಪಾಂತರಗೊಳಿಸಲಾಗಿತ್ತು. ಈ ಪರ್ವತದಲ್ಲಿ ಇಂಡೋನೇಶ್ಯದ ವಿವಿಧ ಪ್ರದೇಶದಲ್ಲಿ ಬೆಳೆಯುವ ವಿಶಿಷ್ಟ ಹೂವುಗಳಿದ್ದವು. ಕಲಾವಿದರ ಪ್ರದರ್ಶನದ ವೇಳೆಯೂ ಈ ಹೂವುಗಳು ಮಿಂಚಿದವು. ಬೆಳಕಿನ ಉಂಡೆಯಾದ ಮೈದಾನ
ಅತ್ಯಂತ ಕಲಾತ್ಮಕವಾಗಿ, ಸುಂದರವಾಗಿ ಕಾಣಿಸಿದ್ದು ಮೈದಾನದ ತುಂಬೆಲ್ಲ ನಡೆದ ಬೆಳಕಿನಾಟ. ಇಡೀ ಮೈದಾನವನ್ನು ಬೆಳಕಿನಿಂದ ರಂಗೇರಿಸಲಾಯಿತು. ಒಮ್ಮೊಮ್ಮೆ ಮೈದಾನವನ್ನು ಕತ್ತಲಲ್ಲಿ ಮುಳುಗಿಸುತ್ತ ಮತ್ತೂಮ್ಮೆ ಜಗ್ಗನೆ ಬೆಳಕನ್ನು ಹತ್ತಿಸುತ್ತ ಮೈದಾನಕ್ಕೆ ಮೈದಾನವೇ ಬೆಳಕಿನ ಉಂಡೆಯಾಗಿ ಬದಲಾಗಿತ್ತು.