ಕೊಲಂಬೊ: ಶ್ರೀಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಸೋಲನುಭವಿಸಿ ಏಷ್ಯಾ ಕಪ್ ಕೂಟದಿಂದ ಹೊರಬಿದ್ದ ಪಾಕಿಸ್ತಾನ ಮುಖಭಂಗ ಅನುಭವಿಸಿದೆ. ಆದರೆ ಇದರ ನಡುವೆ ಪಾಕಿಸ್ತಾನ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಮತ್ತು ಪ್ರಮುಖ ವೇಗಿ ಶಹೀನ್ ಶಾ ಅಫ್ರಿದಿ ನಡುವೆ ಡ್ರೆಸ್ಸಿಂಗ್ ರೂಂನಲ್ಲಿ ಜಗಳವಾಗಿದೆ ಎಂದು ವರದಿ ತಿಳಿಸಿದೆ.
ಪ್ರಶಸ್ತಿ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿದ್ದ ಪಾಕಿಸ್ಥಾನವು ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಸೋಲನುಭವಿಸಿ ಕೂಟದಿಂದಲೇ ಹೊರಬಿತ್ತು. ಬಳಿಕ ಡ್ರೆಸಿಂಗ್ ರೂಂ ನಲ್ಲಿ ನಡೆದ ಸಂಭಾಷಣೆಯ ವೇಳೆ ಮಾತಿಕ ಚಕಮಕಿ ನಡೆದಿದೆ.
“ತಂಡದಲ್ಲಿ ಕೆಲವು ಸೂಪರ್ ಸ್ಟಾರ್ ಗಳು ಎಂದು ಎಣಿಸಿಕೊಂಡವರು ಪ್ರದರ್ಶನ ನೀಡುತ್ತಿಲ್ಲ” ಎಂದು ನಾಯಕ ಬಾಬರ್ ಅಜಂ ದೂರಿದ್ದಾರೆ. ಈ ವೇಳೆ ‘ದೂರುವುದು ಮಾತ್ರವಲ್ಲ; ಉತ್ತಮವಾಗಿ ಆಡಿದವರನ್ನು ಹೊಗಳಬೇಕು’ ಎಂದು ಶಹೀನ್ ಶಾ ಅಫ್ರಿದಿ ಹೇಳಿದ್ದಾರೆ. ಅಫ್ರಿದಿ ಮಧ್ಯದಲ್ಲಿ ಮಾತನಾಡಿರುವುದು ಬಾಬರ್ ಗೆ ಹಿಡಿಸಲಿಲ್ಲ. ಈ ವೇಳೆ ಮಾತಿಕ ಚಕಮಕಿ ಜೋರಾಗಿದೆ. ಇದನ್ನು ಕಂಡ ಕೋಚ್ ಮತ್ತು ಬೌಲರ್ ಹ್ಯಾರಿಸ್ ರೌಫ್ ಇಬ್ಬರನ್ನು ತಡೆದಿದ್ದಾರೆ ಎಂದು ವರದಿಯಾಗಿದೆ.
ಬಳಿಕ ಬಾಬರ್ ಮತ್ತು ಅಫ್ರಿದಿ ಮಾತನಾಡಿಲ್ಲ. ಏರ್ ಪೋರ್ಟ್ ನಲ್ಲಿಯೂ ಬಾಬರ್ ಒಬ್ಬಂಟಿಯಾಗಿಯೇ ಕಾಣಿಸಿಕೊಂಡರು ಎಂದು ವರದಿಯಾಗಿದೆ.