Advertisement

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಪಾಕಿಸ್ಥಾನವನ್ನು ಕೆಡವಿ ಕಂಚು ಗೆದ್ದ ಭಾರತ

11:43 PM Dec 22, 2021 | Team Udayavani |

ಢಾಕಾ: ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು 4-3 ಗೋಲುಗಳಿಂದ ಕೆಡವಿದ ಭಾರತ ಕಂಚಿನ ಪದಕ ಜಯಿಸಿದೆ. ಈ ಎರಡೂ ತಂಡಗಳು ಕಳೆದ ಸಲದ ಜಂಟಿ ಚಾಂಪಿಯನ್‌ಗಳಾಗಿದ್ದವು.

Advertisement

ಭಾರತ, ಪಾಕಿಸ್ಥಾನಗಳೆರಡೂ ಸೆಮಿಫೈನಲ್‌ನಲ್ಲಿ ಸೋತು ಬುಧವಾರ 3ನೇ ಸ್ಥಾನದ ಸ್ಪರ್ಧೆಗೆ ಇಳಿದಿದ್ದವು. ಪಂದ್ಯದ್ದುಕ್ಕೂ ಸಮಬಲದ ಹೋರಾಟ ಕಂಡುಬಂತು. ಪೆನಾಲ್ಟಿ ಕಾರ್ನರ್‌ಗಳ ಪ್ರವಾಹವೇ ಹರಿದು ಬಂತು. ಅದೃಷ್ಟ ಭಾರತದ ಕೋಟೆಯಲ್ಲಿ ಅವಿತಿತ್ತು. ಇದು ಈ ಕೂಟದಲ್ಲಿ ಪಾಕ್‌ ಎದುರು ಮನ್‌ಪ್ರೀತ್‌ ಸಿಂಗ್‌ ಪಡೆ ಸಾಧಿಸಿದ 2ನೇ ಗೆಲುವು. ಲೀಗ್‌ ಹಂತದಲ್ಲಿ ಭಾರತ 3-1 ಅಂತರದಿಂದ ಗೆದ್ದು ಬಂದಿತ್ತು.

ಮೊದಲ ನಿಮಿಷದಲ್ಲೇ ಗೋಲ್‌
ಭಾರತ ಮೊದಲ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ಗಳಿಸಿತು. ಉಪನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಖಾತೆ ತೆರೆದರು. 10ನೇ ನಿಮಿಷದಲ್ಲಿ ಪಾಕಿಸ್ಥಾನ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಅಫ್ರಾಜ್‌ ಅವರಿಂದ ಈ ಗೋಲು ದಾಖಲಾಯಿತು. ಅರ್ಧ ಹಾದಿ ಕ್ರಮಿಸುವಾಗ ಇತ್ತಂಡಗಳು 1-1 ಸಮಬಲದಲ್ಲಿದ್ದವು.

3ನೇ ಕ್ವಾರ್ಟರ್‌ನ 3ನೇ ನಿಮಿಷದಲ್ಲಿ ಅಬ್ದುಲ್‌ ರಾಣಾ ಸಿಡಿಸಿದ ಗೋಲಿನಿಂದ ಪಾಕಿಸ್ಥಾನ ಮುನ್ನಡೆ ಸಾಧಿಸಿತು. ಭಾರತ ಒತ್ತಡಕ್ಕೆ ಸಿಲುಕಿತು. ಈ ಹಂತ ಮುಗಿಯಲು ಕೆಲವೇ ಸೆಕೆಂಡ್‌ಗಳಿರುವಾಗ ಸುಮಿತ್‌ ಸಿಡಿಸಿದ ಗೋಲಿನಿಂದ ಪಂದ್ಯ ಮತ್ತೆ ಸಮಬಲಕ್ಕೆ ಬಂತು.

ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್‌ ಗೆ ತಿವಿದ ಯು ಮುಂಬಾ

Advertisement

ಅಂತಿಮ ಹಂತದ ಪೈಪೋಟಿ
ಅಂತಿಮ ಕ್ವಾರ್ಟರ್‌ನಲ್ಲಿ ಪೈಪೋಟಿ ತೀವ್ರ ಗೊಂಡಿತು. 53ನೇ ನಿಮಿಷದಲ್ಲಿ ವರುಣ್‌ ಕುಮಾರ್‌, 57ನೇ ನಿಮಿಷದಲ್ಲಿ ಆಕಾಶ್‌ದೀಪ್‌ ಸಿಂಗ್‌ ಸೇರಿಕೊಂಡು ಭಾರತಕ್ಕೆ 4-2 ಮುನ್ನಡೆ ಕೊಡಿಸುವಲ್ಲಿ ಯಶಸ್ವಿಯಾದರು.
ಮರು ಗಳಿಗೆಯಲ್ಲೇ ಪಾಕ್‌ ತಿರುಗಿ ಬಿತ್ತು. 57ನೇ ನಿಮಿಷದಲ್ಲೇ ಅಹ್ಮದ್‌ ನದೀಮ್‌ 3ನೇ ಗೋಲು ಬಾರಿಸಿದರು. ಉಳಿದ 3 ನಿಮಿಷಗಳನ್ನು ಎಚ್ಚರಿಕೆಯಿಂದ ಕಳೆದ ಭಾರತ ಕಂಚು ಗೆಲ್ಲುವಲ್ಲಿ ಯಶಸ್ವಿಯಾಯಿತು. ಕೊನೆಯ ಕೆಲವು ನಿಮಿಷಗಳಲ್ಲಿ ಭಾರತ ಹತ್ತೇ ಆಟಗಾರರೊಂದಿಗೆ ಹೋರಾಟ ಸಂಘಟಿಸಬೇಕಾಯಿತು. ಹಾರ್ದಿಕ್‌ ಸಿಂಗ್‌, ಸುಮಿತ್‌ ಅವರಿಗೆ ಹಳದಿ ಕಾರ್ಡ್‌ ನೀಡಲಾಗಿತ್ತು.

ದಕ್ಷಿಣ ಕೊರಿಯಾ ಚಾಂಪಿಯನ್‌
ಭಾರೀ ಪೈಪೋಟಿಯೊಡ್ಡಿದ ಜಪಾನ್‌ ತಂಡವನ್ನು ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸಿದ ದಕ್ಷಿಣ ಕೊರಿಯಾ ನೂತನ ಏಶ್ಯನ್‌ ಹಾಕಿ ಚಾಂಪಿಯನ್‌ ಎನಿಸಿತು. ನಿಗದಿತ ವೇಳೆಯಲ್ಲಿ ಇತ್ತಂಡಗಳು 3-3 ಸಮಬಲ ಸಾಧಿಸಿದ್ದವು.

ಭಾರತ, ಪಾಕಿಸ್ಥಾನ ಹೊರತುಪಡಿಸಿ 3ನೇ ತಂಡವೊಂದು ಇಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ಮೊದಲ ನಿದರ್ಶನ ಇದಾಗಿದೆ. ಕೊರಿಯಾ ಫೈನಲ್‌ ಪ್ರವೇಶಿಸಿದ್ದು ಕೂಡ ಇದೇ ಮೊದಲು. ಜಪಾನ್‌ 2013ರಲ್ಲಿ ಫೈನಲ್‌ ಪ್ರವೇಶಿಸಿ ಪಾಕಿಸ್ಥಾನಕ್ಕೆ ಶರಣಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next