ಹುಲುನ್‌ಬಿಯುರ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿರುವ ಭಾರತ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ (Asian Champions Trophy) ಫೈನಲ್ ಪ್ರವೇಶಿಸಿದೆ. ಕೊರಿಯಾ ವಿರುದ್ದದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತವು 4-1 ಅಂತರದಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.
ಕೂಟದ ಐದೂ ಲೀಗ್ ಪಂದ್ಯಗಳನ್ನು ಗೆದ್ದಿರುವ ಹರ್ಮನ್‌ಪ್ರೀತ್ ಸಿಂಗ್ ಪಡೆ ಉಪಾಂತ್ಯದ ನೆಚ್ಚಿನ ತಂಡವಾಗಿತ್ತು. ಅದರಂತೆ ಆಡಿದ ತಂಡವು 4-1 ಅಂತರದಿಂದ ಗೆದ್ದು ಬೀಗಿತು.
ಪಂದ್ಯ ಆರಂಭವಾದ 13ನೇ ನಿಮಿಷದಲ್ಲಿ ಉತ್ತಮ್ ಸಿಂಗ್ ಅವರು ಗೋಲು ಬಾರಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರು 19ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ 2-0 ಮುನ್ನಡೆ ಒದಗಿಸಿದರು. 32ನೇ ನಿಮಿಷದಲ್ಲಿ ಜರ್ಮನ್ ಪ್ರೀತ್ ಸಿಂಗ್ ಅವರು ಗೋಲು ಬಾರಿಸಿದರು.
ಆದರೆ 33 ನೇ ನಿಮಿಷದಲ್ಲಿ ಕೊರಿಯಾದ ಯಾಂಗ್ ಜಿಹುನ್ ಅವರು ಗೋಲು ಬಾರಿಸಿದರು. 3-1ರಲ್ಲಿ ಮುನ್ನಡೆಯಲ್ಲಿದ್ದ ಭಾರತ ತಂಡಕ್ಕೆ ಕೊನೆಯಲ್ಲಿ ನಾಯಕ ಹರ್ಮನ್ ಮತ್ತೆ ಗೋಲು ತಂದುಕೊಟ್ಟರು. ಈ ಮೂಲಕ ಭಾರತ 4-1 ಅಂತರದಿಂದ ಗೆಲುವು ಸಾಧಿಸಿತು.
ಪಾಕಿಸ್ಥಾನ-ಚೀನ ನಡುವೆ ನಡೆದ ಇನ್ನೊಂದು ಸೆಮಿಫೈನಲ್ ನಲ್ಲಿ ಚೀನಾ ಗೆಲುವು ಸಾಧಿಸಿತು. ಫೈನಲ್ ಪಂದ್ಯವು ಮಂಗಳವಾರ (ಸೆ.17) ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.