ಹುಲುನ್‌ಬಿಯುರ್ (ಚೀನ): “ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ’ ಹಾಕಿ ಪಂದ್ಯಾವಳಿಯಲ್ಲಿ ಭಾರತ ಸತತ 4ನೇ ಜಯದೊಂದಿಗೆ ಮುನ್ನುಗ್ಗಿದೆ. ಈಗಾಗಲೇ ಸೆಮಿಫೈ ನಲ್‌ಗೆ ಲಗ್ಗೆ ಹಾಕಿರುವ ಹರ್ಮನ್‌ಪ್ರೀತ್ ಸಿಂಗ್ ಪಡೆ, ಗುರುವಾರದ ಮುಖಾಮುಖಿಯಲ್ಲಿ ಕೊರಿಯಾವನ್ನು 3-1 ಗೋಲುಗಳಿಂದ ಮಣಿಸಿತು. ಇದರಿಂದ ಶನಿವಾರದ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲು ಹೆಚ್ಚಿನ ಆತ್ಮವಿಶ್ವಾಸ ಗಳಿಸಿತು.
ಅಮೋಘ ಫಾರ್ಮ್ನಲ್ಲಿರುವ ಭಾರತ, ಕೊರಿಯಾ ವಿರುದ್ಧ ಮೊದಲ ಕ್ವಾರ್ಟರ್‌ನಲ್ಲೇ 2 ಗೋಲು ಬಾರಿಸಿ ಮೇಲುಗೈ ಸಾಧಿಸಿತು. ಅರೈಜೀತ್ ಸಿಂಗ್ 8ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಮರು ನಿಮಿಷದಲ್ಲೇ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಒಂದನ್ನು ಗೋಲಾಗಿ ಪರಿವರ್ತಿಸಿದರು. 43ನೇ ನಿಮಿಷದಲ್ಲಿ ಇನ್ನೊಂದು ಪೆನಾಲ್ಟಿ ಕಾರ್ನರನ್ನೂ ಗೋಲಾಗಿಸಿದರು. ಕೊರಿಯಾದ ಏಕೈಕ ಗೋಲು 30ನೇ ನಿಮಿಷದಲ್ಲಿ ಜಿಹುನ್ ಯಾಂಗ್ ಅವರಿಂದ ದಾಖಲಾಯಿತು.
ಗೋಲ್ ಕೀಪರ್ ಸೂರಜ್ ಕರ್ಕೆರಾ ಎದುರಾಳಿಯ ಕೆಲವು ಹೊಡೆತಗಳನ್ನು ಅಮೋಘ ರೀತಿಯಲ್ಲಿ ತಡೆದು ಭಾರತದ ಗೆಲುವಿನಲ್ಲಿ ತಮ್ಮ ಪಾತ್ರವನ್ನೂ ತೆರೆದಿಟ್ಟರು. ಭಾರತದ ರಕ್ಷಣಾ ವಿಭಾಗ ಕೂಡ ಬಲಿಷ್ಠವಾಗಿ ಗೋಚರಿಸಿತು. 35ನೇ ನಿಮಿಷದಲ್ಲಿ ಕೊರಿಯಾ ಬೆನ್ನು ಬೆನ್ನಿಗೆ ಪೆನಾಲ್ಟಿ ಕಾರ್ನರ್ ಪಡೆದ ವೇಳೆ ಎರಡನ್ನೂ ತಡೆಯುವಲ್ಲಿ ಯಶಸ್ವಿಯಾಯಿತು. ಭಾರತ ಇದಕ್ಕೂ ಮುನ್ನ ಚೀನ ವಿರುದ್ಧ 3-0, ಜಪಾನ್ ವಿರುದ್ಧ 5-0 ಹಾಗೂ ಮಲೇಷ್ಯಾ ವಿರುದ್ಧ 8-1 ಅಂತರದ ಜಯ ಸಾಧಿಸಿತ್ತು.
ಸರಪಂಚ್ ಕಾ ಪಂಚ್!
ಇಂದು ಗಳಿಸಿದ ಪೆನಾಲ್ಟಿ ಕಾರ್ನರ್‌ಗಳ ನೆರವಿನೊಂದಿಗೆ, ನಾಯಕ ಹರ್ಮನ್‌ಪ್ರೀತ್ ಸಿಂಗ್ ತಮ್ಮ ದ್ವಿಶತಕ ಗೋಲುಗಳನ್ನು ಪೂರ್ಣಗೊಳಿಸಿದರು(201).ಈ ಗೋಲ್ ಸ್ಕೋರಿಂಗ್ ಫಾರ್ಮ್ ಮುಂದುವರಿಯಲಿ ಮತ್ತು ಟೀಮ್ ಇಂಡಿಯಾಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ತರಲಿ” ಎಂದು ಹಾಕಿ ಇಂಡಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಶುಭ ಹಾರೈಸಿದೆ.