ಢಾಕಾ: ಆತಿಥೇಯ ಬಾಂಗ್ಲಾದೇಶದ ಮೇಲೆ ಸವಾರಿ ಮಾಡಿದ ಭಾರತ, ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ತನ್ನ ದ್ವಿತೀಯ ಮುಖಾಮುಖಿಯಲ್ಲಿ 9-0 ಗೋಲುಗಳ ಭರ್ಜರಿ ಗೆಲುವು ಸಾಧಿಸಿದೆ. ಇದು ಈ ಕೂಟದಲ್ಲಿ ಮನ್‌ಪ್ರೀತ್ ಸಿಂಗ್ ಪಡೆಗೆ ಒಲಿದ ಮೊದಲ ಜಯ. ಕೊರಿಯಾ ಎದುರಿನ ಮೊದಲ ಮುಖಾಮುಖೀ 2-2 ಸಮಬಲದಲ್ಲಿ ಮುಗಿದಿತ್ತು.
ದಿಲ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಭಾರತದ ಸರದಿಯ ಆಕರ್ಷಣೆ ಆಗಿತ್ತು. ಅವರು 12ನೇ, 22ನೇ ಹಾಗೂ 45ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. ಎಲ್ಲವೂ ಫೀಲ್ಡ್ ಗೋಲ್‌ಗಳಾಗಿದ್ದವು.
ಜರ್ಮನ್‌ಪ್ರೀತ್ ಸಿಂಗ್ 2 ಗೋಲು ಹೊಡೆದರು (33ನೇ ಹಾಗೂ 43ನೇ ನಿಮಿಷ). ಉಳಿದ ಗೋಲುಗಳನ್ನು ಸಿಡಿಸಿದ ವರು ಲಲಿತ್ ಉಪಾಧ್ಯಾಯ (28), ಆಕಾಶ್‌ದೀಪ್ ಸಿಂಗ್ (54), ಮನ್‌ದೀಪ್ ಮೋರ್ (55) ಮತ್ತು ಹರ್ಮನ್ ಪ್ರೀತ್ ಸಿಂಗ್ (57ನೇ ನಿಮಿಷ). ಇವರಲ್ಲಿ ಮನ್‌ದೀಪ್ ಮೋರ್ ಪಾಲಿಗೆ ಇದು ಮೊದಲ ಅಂತಾ ರಾಷ್ಟ್ರೀಯ ಪಂದ್ಯ ವಾಗಿತ್ತು.
ಇದನ್ನೂ ಓದಿ:ವಿದ್ಯಾರ್ಥಿಗಳ ಹಾಸ್ಟೆಲ್ ಸಮಸ್ಯೆಗೆ ಶಾಶ್ವತ ಪರಿಹಾರ: ಸಿಎಂ
ಭಾರತಕ್ಕೆ ಮೊದಲ 12 ನಿಮಿಷಗಳಲ್ಲೇ 8 ಪೆನಾಲ್ಟಿ ಕಾರ್ನರ್ ಲಭಿಸಿತ್ತು. ಆದರೆ ಎದುರಾಳಿ ಗೋಲ್‌ಕೀಪರ್ ಅಬು ನಿಪ್ಪೋನ್ ಸಾಹಸದಿಂದ ಭಾರತಕ್ಕೆ ಗೋಲು ದಾಖಲಿಸಲಾಗಲಿಲ್ಲ. ಇಲ್ಲವಾದರೆ ಗೆಲುವಿನ ಅಂತರದಲ್ಲಿ ಇನ್ನಷ್ಟು ಹೆಚ್ಚಳವಾಗುತ್ತಿತ್ತು.
ಶುಕ್ರವಾರ ಭಾರತ-ಪಾಕಿಸ್ಥಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.