ವುಹಾನ್ (ಚೀನ): ಏಷ್ಯನ್ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಸೆಮಿಫೈನಲ್‌ನಲ್ಲಿ ಖ್ಯಾತ ಮಹಿಳಾ ಸಿಂಗಲ್ಸ್ ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿ ಭರವಸೆ ಮೂಡಿಸಿದ್ದ ಎಚ್.ಎಸ್.ಪ್ರಣಯ್ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಕೂಟದಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಈ ಮೊದಲು ಪಿ.ವಿ.ಸಿಂಧು ಹಾಗೂ ಕಿದಂಬಿ ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ನಲ್ಲೇ ಸೋಲು ಅನುಭವಿಸಿದ್ದರು.
ರೋಚಕ ಸೆಣಸಾಟದಲ್ಲಿ ಸೈನಾಗೆ ಸೋಲು
ಸೈನಾ ನೆಹ್ವಾಲ್ ಸೆಮಿಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ಆಟಗಾರ್ತಿ ತೈ ಝು ಯಿಂಗ್‌ಗೆ ಪ್ರಬಲ ಸ್ಪರ್ಧೆ ನೀಡಿದರು. ಅಂತಿಮವಾಗಿ 25-27, 19-21 ಗೇಮ್‌ಗಳ ಅಂತರದಿಂದ ಶರಣಾಗಬೇಕಾಯಿತು. ಮೊದಲ ಗೇಮ್‌ನಲ್ಲಿ ಸೈನಾ 25-27 ಅಂಕಗಳಿಂದ ಸೋತು 1-0 ಹಿನ್ನಡೆ ಅನುಭವಿಸಿದರು. ಎರಡನೇ ಗೇಮ್‌ನಲ್ಲೂ ಇಬ್ಬರಿಂದ ಕಠಿನ ಸ್ಪರ್ಧೆ ನಡೆಯಿತು. ಕೊನೆಗೂ 18-21 ಗೇಮ್‌ಗಳ ಅಂತರದಿಂದ ಸೈನಾ ಸೋತು 2-0 ಅಂತರದಿಂದ ಪಂದ್ಯ ಕಳೆದುಕೊಂಡರು. ಒಟ್ಟಾರೆ 8ನೇ ಮತ್ತು ಈ ಋತುವಿನನಲ್ಲಿ 3 ಸಲ ಯಿಂಗ್ ವಿರುದ್ಧ ಸೈನಾ ನೇರ ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಒಲಿಂಪಿಕ್ಸ್ ಚಾಂಪಿಯನ್‌ಗೆ ಪ್ರಣಯ್ ಶರಣು: ವಿಶ್ವದ 10ನೇ ಶ್ರೇಯಾಂಕಿತ ಆಟಗಾರ ಪ್ರಣಯ್ 16-21, 18-21 ಗೇಮ್‌ಗಳ ಅಂತರದಿಂದ ಚೀನದ ಒಲಿಂಪಿಕ್ ಚಾಂಪಿಯನ್ ಚೆನ್ ಲಾಂಗ್ ವಿರುದ್ಧ ಸೋತರು. ಪ್ರಣಯ್ ಸೋಲುವ ಮೊದಲು ಎದುರಾಳಿಗೆ ಸಾಕಷ್ಟು ಬೆವರಿಳಿಸಿದ್ದರು.