Advertisement
ಅಂತಿಮ ದಿನವಾದ ಬುಧವಾರ 200 ಮೀ. ಓಟದಲ್ಲಿ ದ್ಯುತಿ ಚಂದ್ ಕಂಚಿನ ಪದಕ ಗೆದ್ದು ಭಾರತದ ಪದಕ ಬೇಟೆ ಆರಂಭಿಸಿದರು. ಅನಂತರ ಕೆಲವೇ ಕ್ಷಣಗಳಲ್ಲಿ ವನಿತೆಯರ 1,500 ಮೀ. ಓಟದಲ್ಲಿ ಪಿ.ಯು. ಚಿತ್ರಾ ಕೂಟದ ಚಿನ್ನವನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. 2017ರ ಆವೃತ್ತಿಯಲ್ಲೂ ಚಿತ್ರಾ ಬಂಗಾರ ಜಯಿಸಿದ್ದರು.
ವನಿತೆಯರ 4/400 ಮೀ. ರಿಲೇ ಸ್ಪರ್ಧೆಯಲ್ಲಿ ಪ್ರಾಚಿ, ಎಂ.ಆರ್. ಪೂವಮ್ಮ, ಸರಿತಾಬೆನ್ ಗಾಯಕ್ವಾಡ್ ಮತ್ತು ವಿ.ಕೆ. ವಿಸ್ಮಯಾ ಅವರನ್ನೊಳಗೊಂಡ ಭಾರತ ತಂಡ 3 ನಿಮಿಷ, 32.21 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತು. ಬಹ್ರೈನ್ ಚಿನ್ನ, ಜಪಾನ್ ಕಂಚಿನ ಪದಕ ಗೆದ್ದಿತು.
Related Articles
ಪುರುಷರ 4/400 ಮೀ. ರಿಲೇ ಸ್ಪರ್ಧೆಯೂ ನಾಟಕೀಯ ರೀತಿಯಲ್ಲಿ ಕೊನೆಗೊಂಡಿದೆ. ಆರಂಭದಲ್ಲಿ ಕೆ. ಮೊಹಮ್ಮದ್, ಕೆ.ಎಸ್. ಜೀವನ್, ಮೊಹಮ್ಮದ್ ಅನಾಸ್ ಮತ್ತು ಅರೋಕಿಯಾ ರಾಜೀವ್ ಅವರನ್ನು ಒಳಗೊಂಡ ಭಾರತದ ತಂಡ 3 ನಿಮಿಷ, 03.28 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಬೆಳ್ಳಿ ಪದಕ ಜಯಿಸಿತ್ತು. ಜಪಾನ್ ಮತ್ತು ಚೀನಕ್ಕೆ ಚಿನ್ನ, ಕಂಚು ಒಲಿದಿತ್ತು. ಆದರೆ ಭಾರತದ ಕ್ರೀಡಾಪಟುಗಳು ತನ್ನ ಸ್ಪರ್ಧಿಯನ್ನು ತಡೆದಿದ್ದಾರೆ ಎಂದು ಚೀನ ಪ್ರತಿಭಟನೆ ಮಾಡಿದ ಕಾರಣ ಭಾರತದ ಕ್ರೀಡಾಪಟುಗಳನ್ನು 163.2 ನಿಯಮದಂತೆ ಅನರ್ಹ ಎಂದು ಪರಿಗಣಿಸಲಾಯಿತು. ಆರಂಭದಲ್ಲಿ ಕಂಚು ಗೆದ್ದಿದ್ದ ಚೀನ ಬೆಳ್ಳಿ ಪದಕ ಮತ್ತು ಕತಾರ್ ತಂಡಕ್ಕೆ ಕಂಚಿನ ಪದಕ ನೀಡಲಾಯಿತು. ಭಾರತ ಇದನ್ನು ಪ್ರತಿಭಟಿಸಿ ಮನವಿ ಮಾಡಿಕೊಂಡರೂ ಇದು ತಿರಸ್ಕರಿಸಲ್ಪಟ್ಟಿತು.
Advertisement
17 ಪದಕ ಗೆದ್ದ ಭಾರತಸ್ಟಾರ್ ಆ್ಯತ್ಲೀಟ್‌ಗಳ ಅನುಪಸ್ಥಿತಿಯಲ್ಲೂ ಭಾರತೀಯ ಕ್ರೀಡಾಪಟುಗಳು ಈ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. 3 ಚಿನ್ನ, 7 ಬೆಳ್ಳಿ ಮತ್ತು 7 ಕಂಚಿನ ಪದಕ ಗೆದ್ದಿರುವ ಭಾರತ ಒಟ್ಟು 17 ಪದಕಗಳೊಂದಿಗೆ 4ನೇ ಸ್ಥಾನ ಪಡೆಯಿತು. ಗೋಮತಿ ಮಾರಿಮುತ್ತು, ತೇಜಿಂದರ್ ಪಾಲ್ ಸಿಂಗ್ ತೂರ್ ಮತ್ತು ಪಿ.ಯು. ಚಿತ್ರಾ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. 2017ರ ತವರಿನ ಕೂಟದಲ್ಲಿ ಭಾರತ ಒಟ್ಟು 29 ಪದಕಗಳನ್ನು ಗೆದ್ದು ಮೊದಲ ಬಾರಿಗೆ ಅಗ್ರಸ್ಥಾನ ಅಲಂಕರಿಸಿತ್ತು. ಈ ಬಾರಿ ಬಹ್ರೈನ್ ಮೊದಲ ಸ್ಥಾನ, ಚೀನ ದ್ವಿತೀಯ ಮತ್ತು ಜಪಾನ್ ತೃತೀಯ ಸ್ಥಾನ ಪಡೆದಿವೆ.