ಭಾರತದ ಕುಸ್ತಿಪಟು ವಿಕಾಸ್ ಕೃಷ್ಣನ್ ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಈಗಾಗಲೇ ಜಕಾರ್ತಾಕ್ಕೆ ತೆರಳಿದ್ದು, ಪದಕ ಗೆಲ್ಲುವುದು ಮಾತ್ರವಲ್ಲದೆ ಹೊಸ ದಾಖಲೆ ಸೃಷ್ಟಿಸಲು ಸಿದ್ಧರಾಗಿದ್ದಾರೆ. 2010ರ ಏಶ್ಯಾಡ್‌ನಲ್ಲಿ ಚಿನ್ನದ ಪದಕ, 2014ರ ಏಶ್ಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವಿಕಾಸ್ ಕೃಷ್ಣನ್, ಏಶ್ಯನ್ ಗೇಮ್ಸ್‌ನಲ್ಲಿ ಸತತ 3 ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಹಾದಿಯಲ್ಲಿದ್ದಾರೆ. ಒಂದು ವೇಳೆ ವಿಕಾಸ್ ಕೃಷ್ಣನ್ ಅವರು ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದರೆ, ಹವಾ ಸಿಂಗ್ ಹಾಗೂ ವಿಜೇಂದರ್ ಸಿಂಗ್ ಅವರ ದಾಖಲೆಯನ್ನು ಮೀರಿ ನಿಲ್ಲಲಿದ್ದಾರೆ.
ಹವಾ ಸಿಂಗ್ 1966 ಹಾಗೂ 1970ರ ಏಶ್ಯನ್ ಗೇಮ್ಸ್ ಕುಸ್ತಿ ಸ್ಪರ್ಧೆಯ ಹೆವಿವೇಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಮಿಡ್ಲ್ವೇಟ್ ವಿಭಾಗದಲ್ಲಿ ವಿಜೇಂದರ್ ಸಿಂಗ್ 2006 ದೋಹಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಮತ್ತು 2010ರಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದರು.
“ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿರುವುದರಿಂದ ನನ್ನ ಮೇಲಿರುವ ಎಲ್ಲ ಒತ್ತಡ ನಿವಾರಣೆಯಾಗಿದೆ. ಮನಸ್ಸು ಶಾಂತಚಿತ್ತದಿಂದ ಕೂಡಿದೆ. ನನ್ನ ದೇಹವು ಆರೋಗ್ಯಕರವಾಗಿದೆ. ಕಳೆದ ತಿಂಗಳು ಜರ್ಮನಿಯಲ್ಲಿ ತರಬೇತಿಯ ವೇಳೆ ಜ್ವರದಿಂದ ಬಳಲುತ್ತಿದ್ದೆ. ಈಗ ನಾನು ನೂರು ಪ್ರತಿಶತ ಫಿಟ್ ಆಗಿದ್ದೇನೆ’ ಎಂದು ವಿಕಾಸ್ ಕೃಷ್ಣನ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಕಾಸ್ 2010ರಲ್ಲಿ ಲೈಟ್‌ವೇಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರೆ, 2014ರಲ್ಲಿ ಮಿಡ್ಲ್ವೇಟ್ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು. ಏಶ್ಯನ್ ಗೇಮ್ಸ್ ಕುಸ್ತಿ ಸ್ಪರ್ಧೆ ಆಗಸ್ಟ್ 24ರಿಂದ ಆರಂಭವಾಗಲಿದೆ.