Advertisement

ಏಶ್ಯ ಇಲೆವೆನ್‌: ಭಾರತದ 6 ಕ್ರಿಕೆಟಿಗರು

11:16 AM Feb 27, 2020 | sudhir |

ಢಾಕಾ: ಬಾಂಗ್ಲಾದೇಶದಲ್ಲಿ ನಡೆಯಲಿರುವ 2 ಪಂದ್ಯಗಳ ಟಿ20 ಸರಣಿಯಲ್ಲಿ ವಿಶ್ವ ಇಲೆವೆನ್‌ ತಂಡವನ್ನು ಎದುರಿಸಲಿರುವ ಏಶ್ಯ ಇಲೆವೆನ್‌ ತಂಡವನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ವಿರಾಟ್‌ ಕೊಹ್ಲಿ ಸೇರಿದಂತೆ ಭಾರತದ 6 ಆಟಗಾರರಿದ್ದಾರೆ. ಇವರಲ್ಲಿ ಕೊಹ್ಲಿ ಮತ್ತು ರಾಹುಲ್‌ ಆಡುವುದು ಇನ್ನೂ ಖಚಿತಗೊಂಡಿಲ್ಲ.

Advertisement

ಬಾಂಗ್ಲಾದೇಶದ ಜನಕ, ಬಂಗಬಂಧು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಜನ್ಮ ಶತಾಬ್ದದ ಸ್ಮರಣಾರ್ಥ ಮಾ. 21 ಮತ್ತು 22ರಂದು ಢಾಕಾದ “ಶೇರ್‌ ಎ ಬಾಂಗ್ಲಾ ಸ್ಟೇಡಿಯಂ’ನಲ್ಲಿ ಈ ಪಂದ್ಯಗಳನ್ನು ಆಡಲಾಗುವುದು.

ರಾಹುಲ್‌, ಕೊಹ್ಲಿ ಒಂದೇ ಪಂದ್ಯ?
ಈ ಸರಣಿಯಲ್ಲಿ ಕೊಹ್ಲಿ ಯಾವುದಾದ ರೊಂದು ಪಂದ್ಯದಲ್ಲಿ ಆಡಬೇಕೆಂಬುದು ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ಬಯಕೆ. ಆದರೆ ಇದನ್ನು ಬಿಸಿಸಿಐ ಇನ್ನಷ್ಟೇ ದೃಢಪಡಿಸಬೇಕಿದೆ. ರಾಹುಲ್‌ ಕೂಡ ಒಂದೇ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಸದ್ಯ ಧವನ್‌, ಪಂತ್‌, ಕುಲದೀಪ್‌ ಮತ್ತು ಶಮಿ ಅವರ ಹೆಸರಷ್ಟೇ ಅಧಿಕೃತಗೊಂಡಿದೆ ಎಂದು ಬಾಂಗ್ಲಾ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ನಜ್ಮುಲ್‌ ಹಸನ್‌ ಹೇಳಿದ್ದಾರೆ.

ನ್ಯೂಜಿಲ್ಯಾಂಡ್‌ ಸರಣಿ ಮುಗಿದ ಒಂದೇ ವಾರದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಮಾ. 29ರಿಂದ ಐಪಿಎಲ್‌ ಆರಂಭವಾಗಲಿದೆ. ಹೀಗಾಗಿ ಕೊಹ್ಲಿಗೆ ವಿಶ್ರಾಂತಿ ಲಭಿಸದು ಎನ್ನುವುದು ಮಂಡಳಿಯ ಆತಂಕ.

ಈ ತಂಡದಲ್ಲಿ ಆತಿಥೇಯ ಬಾಂಗ್ಲಾದ ನಾಲ್ವರು ಕ್ರಿಕೆಟಿಗರಿದ್ದಾರೆ. ನೇಪಾಲದ ಸಂದೀಪ್‌ ಲಮಿಚಾನೆ ಕೂಡ ಅವಕಾಶ ಪಡೆದಿದ್ದಾರೆ. ಆದರೆ ಪಾಕಿಸ್ಥಾನದ ಯಾವುದೇ ಆಟಗಾರರಿಲ್ಲ.

Advertisement

ಡು ಪ್ಲೆಸಿಸ್‌ ನಾಯಕ
ವಿಶ್ವ ಇಲೆವೆನ್‌ ತಂಡದಲ್ಲಿ ಸ್ಫೋಟಕ ಆರಂಭಕಾರ ಕ್ರಿಸ್‌ ಗೇಲ್‌ ಸೇರಿದಂತೆ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಜಿಂಬಾಬ್ವೆಯ ಬ್ರೆಂಡನ್‌ ಟೇಲರ್‌, ಇಂಗ್ಲೆಂಡಿನ ಅಲೆಕ್ಸ್‌ ಹೇಲ್ಸ್‌, ಹರಿಣಗಳ ನಾಡಿನ ಲುಂಗಿ ಎನ್‌ಗಿಡಿ ವಿಶ್ವ ತಂಡದ ಪ್ರಮುಖ ಆಟಗಾರರು. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾ ಡು ಪ್ಲೆಸಿಸ್‌ ಈ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯದ ಮಾಜಿ ಆಟಗಾರ ಟಾಮ್‌ ಮೂಡಿ ಈ ತಂಡದ ಕೋಚ್‌ ಆಗಿದ್ದಾರೆ.

ಏಶ್ಯ ಇಲೆವೆನ್‌ ತಂಡ
ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ಶಿಖರ್‌ ಧವನ್‌, ರಿಷಭ್‌ ಪಂತ್‌, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ಲಿಟನ್‌ ದಾಸ್‌, ತಮಿಮ್‌ ಇಕ್ಬಾಲ್‌, ಮುಶ್ಫಿಕರ್‌ ರಹೀಂ, ಮುಸ್ತಫಿಜುರ್‌ ರೆಹಮಾನ್‌, ಸಂದೀಪ್‌ ಲಮಿಚಾನೆ, ಲಸಿತ ಮಾಲಿಂಗ, ತಿಸರ ಪೆರೆರ, ರಶೀದ್‌ ಖಾನ್‌, ಮುಜೀಬ್‌ ಉರ್‌ ರೆಹಮಾನ್‌.

ವಿಶ್ವ ಇಲೆವೆನ್‌ ತಂಡ
ಫಾ ಡು ಪ್ಲೆಸಿಸ್‌ (ನಾಯಕ), ಅಲೆಕ್ಸ್‌ ಹೇಲ್ಸ್‌, ಕ್ರಿಸ್‌ ಗೇಲ್‌, ನಿಕೋಲಸ್‌ ಪೂರಣ್‌, ಬ್ರೆಂಡನ್‌ ಟೇಲರ್‌, ಜಾನಿ ಬೇರ್‌ಸ್ಟೊ, ಕೈರನ್‌ ಪೊಲಾರ್ಡ್‌, ಆದಿಲ್‌ ರಶೀದ್‌, ಶೆಲ್ಡನ್‌ ಕಾಟ್ರೆಲ್‌, ಲುಂಗಿ ಎನ್‌ಗಿಡಿ, ಆ್ಯಂಡ್ರೂé ಟೈ, ಮಿಚೆಲ್‌ ಮೆಕ್ಲೆನಗನ್‌.

Advertisement

Udayavani is now on Telegram. Click here to join our channel and stay updated with the latest news.

Next