Advertisement

ಸೆ.15ರಿಂದ ಶುರು; ನಿಮಗೆ ತಿಳಿದಿರಲಿ ಏಶ್ಯಾಕಪ್ ನ ರೋಚಕ ಇತಿಹಾಸ

03:12 PM Sep 14, 2018 | |

2018ನೇ ಸಾಲಿನ ಏಶ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್  ಸಪ್ಟೆಂಬರ್ 15ರಿಂದ ನಡೆಯಲಿದೆ. ಈ ಆವೃತ್ತಿಯ ಏಶ್ಯಾಕಪ್ ಗೆ ದುಬೈ ಆತಿಥ್ಯ ವಹಿಸಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ್ , ಹಾಂಕಾಂಗ್ ದೇಶಗಳು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿವೆ. ಏಶ್ಯಾಕಪ್ ಕೂಟ ಈ ಎಲ್ಲಾ ದೇಶಗಳಿಗೆ ಪ್ರತಿಷ್ಠೆಯ ಕಣ. ಏಶ್ಯಾಕಪ್ ಇತಿಹಾಸದ ಕೆಲವು ಮಹತ್ವದ ಅಂಶಗಳು ಇಲ್ಲಿವೆ . 

Advertisement

1) ಏಶ್ಯಾಕಪ್ ನ ಮೊದಲ ಆವೃತ್ತಿ ಆರಂಭವಾಗಿದ್ದು 1984ರಲ್ಲಿ. ಶಾರ್ಜಾದಲ್ಲಿ ನಡೆದ ಪ್ರಥಮ ಕೂಟದಲ್ಲಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಿದ್ದವು. ಸುನೀಲ್ ಗಾವಸ್ಕರ್ ನಾಯಕತ್ವದ ಭಾರತ ತಂಡ ಚೊಚ್ಚಲ ಏಶ್ಯಾಕಪ್  ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

2) ಏಶ್ಯಾಕಪ್ ನ ಎರಡನೇ ಆವೃತ್ತಿ1986ರಲ್ಲಿ ಶ್ರೀಲಂಕಾದಲ್ಲಿ ನಡೆಯಿತು. ಶ್ರೀಲಂಕಾ ವಿರುದ್ದದ ರಾಜತಾಂತ್ರಿಕ ಸಮಸ್ಯೆಯಿಂದಾಗಿ ಭಾರತ ತಂಡ ಈ ಪಂದ್ಯಾವಳಿಯಲ್ಲಿ ಆಡಿರಲಿಲ್ಲ. ಬಾಂಗ್ಲಾದೇಶ ಮೊದಲ ಬಾರಿಗೆ ಏಶ್ಯಾಕಪ್ ಗೆ ಅರ್ಹತೆ ಪಡೆಯಿತು. ಫೈನಲ್ ನಲ್ಲಿಆತಿಥೇಯ ಶ್ರೀಲಂಕಾ ಪಾಕಿಸ್ಥಾನವನ್ನು ಸೋಲಿಸಿ ಚಾಂಪಿಯನ್ ಆಯಿತು. 

3) ಬಾಂಗ್ಲಾದೇಶ ಮೊದಲ ಬಾರಿಗೆ 1988ರ ಏಶ್ಯಾಕಪ್ ಆತಿಥ್ಯ ವಹಿಸಿತು. ಟೀಂ ಇಂಡಿಯಾ ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿ ಪಡೆಯಿತು.

4) 1990ರ ಆವೃತ್ತಿಯ ಏಶ್ಯಾಕಪ್ ಭಾರತದಲ್ಲಿ ನಡೆಯಿತು. ರಾಜಕೀಯ ಕಾರಣಗಳಿಂದ ಪಾಕಿಸ್ತಾನ ಈ ಕೂಟದಲ್ಲಿ ಭಾಗವಹಿಸಲಿಲ್ಲ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಭಾರತ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.

Advertisement

5) ಭಾರತ ಮತ್ತು ಪಾಕಿಸ್ತಾನದ ರಾಜಕೀಯ ಕಾರಣಗಳಿಂದ 1993ರ ಕೂಟ ರದ್ದಾಯಿತು. 

6) 1998ರ ಕೂಟದಲ್ಲಿ ಭಾರತದ ಅರ್ಷದ್ ಅಯೂಬ್ ಮೊದಲ 5 ವಿಕೆಟ್ ಗೊಚಲು ಪಡೆದು ದಾಖಲೆ ಬರೆದರು. ಢಾಕಾದಲ್ಲಿ ನಡೆದ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ 21 ರನ್ ಗೆ 5 ವಿಕೆಟ್ ಪಡೆದು ಏಶ್ಯಾಕಪ್ ಇತಿಹಾಸದಲ್ಲಿ 5 ವಿಕೆಟ್ ಗೊಂಚಲು ಪಡೆದ ಬೌಲರ್ ಆಗಿ ಮೂಡಿ ಬಂದರು.

7) 2000ರ ಏಶ್ಯಾಕಪ್ ನಲ್ಲಿ ಭಾರತ ತಂಡ ಮೊದಲ ಬಾರಿಗೆ ಅಂತಿಮ ಘಟ್ಟ ತಲುಪುವಲ್ಲಿ ವಿಫಲವಾಯಿತು. ಬಾಂಗ್ಲಾದೇಶದಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಾಕಿಸ್ತಾನ ವಿಜಯಿಯಾಯಿತು.

8) 2004ರ ಆವೃತ್ತಿಯಲ್ಲಿ ಮೊದಲ ಬಾರಿಗೆ ಹಾಂಕಾಂಗ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಏಶ್ಯಾಕಪ್ ಪ್ರವೇಶ ಪಡೆದವು. ಅದಲ್ಲದೇ ಮೊದಲ ಬಾರಿಗೆ ಪಂದ್ಯಾವಳಿಯು ಗುಂಪು ಹಂತ, ಸೂಪರ್ ಫೋರ್ ಮತ್ತು ಫೈನಲ್ ರೂಪದಲ್ಲಿ ನಡೆಯಿತು.

9) 2008 ರಲ್ಲಿ ಪಾಕಿಸ್ತಾನದಲ್ಲಿ ನಡೆದ ಪಂದ್ಯಾವಳಿಯ ಫೈನಲ್ ನಲ್ಲಿ ಶ್ರೀಲಂಕಾ ತಂಡ ಮ್ಯಾಜಿಕ್ ಸ್ಪಿನ್ನರ್ ಅಜಂತಾ ಮೆಂಡಿಸ್ ರ ಅದ್ಭುತ ಬೌಲಿಂಗ್ ಸಾಹಸದಿಂದ ಭಾರತವನ್ನು ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. ಈ ಪಂದ್ಯದಲ್ಲಿ ಅಜಂತ ಮೆಂಡಿಸ್ ಕೇವಲ 13 ರನ್ ನೀಡಿ 6 ವಿಕೆಟ್ ಪಡೆದರು. ಇದು ಏಶ್ಯಾಕಪ್ ಇತಿಹಾಸದ ಅತ್ಯುತ್ತಮ ಬೌಲಿಂಗ್ ಆಗಿದೆ.

10 )     2010ರಲ್ಲಿ ಭಾರತ ಮತ್ತೆ ಏಶ್ಯಾಕಪ್ ಚಾಂಪಿಯನ್ ಆಗಿ ಮೂಡಿ ಬಂತು. ಇದಕ್ಕಾಗಿ 15  ವರ್ಷಗಳು ಕಾಯಬೇಕಾಯಿತು. ಅಂತಿಮ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸಿತ್ತು. ಈ ಸರಣಿಯಲ್ಲಿ ವಿರೇಂದ್ರ ಸೆಹ್ವಾಗ್ ವಿಶಿಷ್ಟ ದಾಖಲೆ ನಿರ್ಮಿಸಿದ್ದರು. ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ ಸೆಹ್ವಾಗ್ 2.5  ಓವರ್ ನಲ್ಲಿ ಕೇವಲ 6  ರನ್ ನೀಡಿ4 ವಿಕೆಟ್ ಪಡೆದು ಅತ್ಯುತ್ತಮ ಬೌಲಿಂಗ್ ಸ್ಟ್ರೈಕ್ ರೇಟ್  ದಾಖಲೆ ಮಾಡಿದ್ದರು.

11) 2012ರ ಏಶ್ಯಾಕಪ್ ನಲ್ಲಿ ಭಾರತ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಅವಿಸ್ಮರಣೀಯ ಗೆಲುವು ಸಾಧಿಸಿತ್ತು. ಪಾಕಿಸ್ತಾನದ 330 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ವಿರಾಟ್ ಕೊಹ್ಲಿಯ ಭರ್ಜರಿ 183 ರನ್ ಸಹಾಯದಿಂದ ಗುರಿ ಬೆನ್ನಟ್ಟಿ ಗೆಲುವಿನ ನಗೆ ಬೀರಿತು. 

12) 2016ರಲ್ಲಿ ಮೊದಲ ಬಾರಿಗೆ ಏಶ್ಯಾಕಪ್ ಪಂದ್ಯಾವಳಿ ಟಿ-20 ರೂಪದಲ್ಲಿ ನಡೆಯಿತು. ಈ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿತ್ತು.

13) ಇದುವರೆಗೆ ಒಟ್ಟು 13 ಏಶ್ಯಾಕಪ್ ಪಂದ್ಯಾವಳಿಗಳನ್ನು ಆಡಲಾಗಿದ್ದು, ಭಾರತ ಅತೀ ಹೆಚ್ಚು ಸಲ ಚಾಂಪಿಯನ್ ಆದ ತಂಡ ( 6 ), ನಂತರದ ಸ್ಥಾನ ಶ್ರೀಲಂಕಾಕ್ಕೆ ( 5).

14) ಎಲ್ಲಾ 13 ಪಂದ್ಯಾವಳಿಗಳನ್ನು ಆಡಿದ ಏಕಮಾತ್ರ ತಂಡ ಶ್ರೀಲಂಕಾ. ಭಾರತ ಮತ್ತು ಪಾಕಿಸ್ತಾನ ತಂಡಗಳು 12 ಪಂದ್ಯಾವಳಿಗಳಲ್ಲಿ ಪಾಲು ಪಡೆದಿವೆ.

15) ಶ್ರೀಲಂಕಾದ ಸನತ್ ಜಯಸೂರ್ಯ ಏಶ್ಯಾಕಪ್ ನ ಗರಿಷ್ಠ ರನ್ ಸರದಾರ (1220) ಮುತ್ತಯ್ಯ ಮುರಳೀಧರನ್ ಅತೀ ಹೆಚ್ಚು ವಿಕೆಟ್ ಪಡೆದವರು. ( 30)

Advertisement

Udayavani is now on Telegram. Click here to join our channel and stay updated with the latest news.

Next