ಕರಾಚಿ: ಐಪಿಎಲ್ ಟೂರ್ನಿ ಆಯೋಜಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಸಪ್ಟಂಬರ್‌ನಲ್ಲಿ ಯುಎಇಯಲ್ಲಿ ನಡೆಯಬೇಕಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ರದ್ದು ಮಾಡುವುದಕ್ಕೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒಪ್ಪಿಗೆ ಸೂಚಿಸುವುದಿಲ್ಲ ಎಂದು ಪಿಸಿಬಿ ಚೇರ್ಮನ್ ಎಹಸಾನ್ ಮಣಿ ಹೇಳಿದ್ದಾರೆ.
ಕೋವಿಡ್ 19 ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 29ರಂದು ಆರಂಭ ವಾಗಬೇಕಿದ್ದ ಐಪಿಎಲ್ 2020 ಟೂರ್ನಿಯನ್ನು ತಾತ್ಕಾಲಿಕವಾಗಿ ಎಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಆದರೆ ಭಾರತದಲ್ಲಿ ಮೇ 3ರ ವರೆಗೆ ಲಾಕ್‌ಡೌನ್ ಮುಂದುವರಿದಿರುವ ಕಾರಣ ಐಪಿಎಲ್ ಆಯೋಜನೆ ಅತಂತ್ರಸ್ಥಿತಿಗೆ ತಲುಪಿದೆ.
ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ಗ್ೂ ಮೊದಲು ಅಥವಾ ವಿಶ್ವಕಪ್ ರದ್ದಾದರೆ ಅದೇ ಅವಧಿಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಒಂದು ವೇಳೆ ವಿಶ್ವಕಪ್ ನಿಗದಿತ ಸಮಯದಲ್ಲಿ ನಡೆಯುವುದು ಖಚಿತವಾದರೆ ಅದಕ್ಕೂ ಮೊದಲು ಐಪಿಎಲ್ ಆಡಿಸಲು ಮುಂದಾದರೆ ಸಪ್ಟಂಬರ್‌ನಲ್ಲಿ ನಡೆಯಬೇಕಿರುವ ಏಷ್ಯಾ ಕಪ್ ಟೂರ್ನಿಗೆ ಅಡಚಣೆಯಾಗಲಿದೆ ಎಂದು ಪಿಸಿಬಿಯ ಚೇರ್ಮನ್ ಅಧ್ಯಕ್ಷ ಎಹಸಾನ್ ಮಣಿ ತಿಳಿಸಿದ್ದಾರೆ.
ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪಾಕಿಸ್ಥಾನ ಆತಿಥ್ಯವಹಿಸಬೇಕಿತ್ತು. ಆದರೆ, ಪಾಕಿಸ್ಥಾನದಲ್ಲಿ ಟೂರ್ನಿ ನಡೆಯುವುದಾದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು. ಪರಿಣಾಮ ಟೂರ್ನಿಯನ್ನು ಯುಎಇ ಆತಿಥ್ಯದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಎಲ್ಲ ತಂಡಗಳ ಒಪ್ಪಿಗೆ ಅಗತ್ಯ
“ಏಷ್ಯಾ ಕಪ್ ನಡೆಸುವುದೋ ಬೇಡವೋ ಎಂಬುದು ಕೇವಲ ಭಾರತ ಮತ್ತು ಪಾಕಿಸ್ಥಾನ ತಂಡಗಳು ನಿರ್ಧರಿಸುವುದಲ್ಲ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಇತರ ತಂಡಗಳು ಕೂಡ ಈ ಬಗ್ಗೆ ನಿರ್ಧರಿಸುವ ಹಕ್ಕನ್ನು ಹೊಂದಿವೆ. ಏಷ್ಯಾ ಕಪ್ ಕ್ರಿಕೆಟ್ ನಡೆಯುವುದು ಮುಖ್ಯ. ಈ ಟೂರ್ನಿಯಿಂದ ಲಭ್ಯವಾಗುವ ಮೊತ್ತವನ್ನು ಏಷ್ಯಾ ಭಾಗದ ಕ್ರಿಕೆಟ್ ಸಂಸ್ಥೆಗಳಿಗೆ ಹಂಚಲಾಗುತ್ತದೆ. ಏಷ್ಯನ್ ಕ್ರಿಕೆಟ್ ಮಂಡಳಿ ಸದಸ್ಯತ್ವ ಪಡೆದಿರುವ ಎಲ್ಲ ರಾಷ್ಟ್ರಗಳಿಗೂ ಇದು ಮುಖ್ಯ ಎಂದು ಮಣಿ ಹೇಳಿದ್ದಾರೆ.