ನವದೆಹಲಿ: ಬಿಸಿಸಿಐ ಮತ್ತು ಪಿಸಿಬಿ (ಪಾಕ್ ಕ್ರಿಕೆಟ್ ಮಂಡಳಿ) ನಡುವೆ ಏಷ್ಯಾ ಕಪ್ ಮತ್ತು ವಿಶ್ವ ಕಪ್ ಸಂಘಟನೆ ಹಿನ್ನೆಲೆಯಲ್ಲಿ ಜಿದ್ದಾಜಿದ್ದಿ ಶುರುವಾಗಿದೆ. ಅದೀಗ ಪಾಕ್-ಶ್ರೀಲಂಕಾ ಟೆಸ್ಟ್ ಸರಣಿಗೂ ವಿಸ್ತರಿಸಿದೆ. ಏಷ್ಯಾ ಕಪ್ ಆಯೋಜನೆಗೆ ಸಂಬಂಧಿಸಿದಂತೆ ಪಾಕ್ ನೀಡಿದ ಯೋಜನೆಯನ್ನು ಒಪ್ಪಿಕೊಳ್ಳದಿದ್ದರೆ, ಶ್ರೀಲಂಕಾದಲ್ಲಿ ನಡೆಯಬೇಕಿರುವ ಟೆಸ್ಟ್ ಸರಣಿಯನ್ನು ಬಹಿಷ್ಕರಿಸುವುದಾಗಿ ಪಿಸಿಬಿ ಬೆದರಿಕೆಯೊಡ್ಡಿದೆ!
ಪಾಕ್ ಆತಿಥ್ಯದಲ್ಲಿ ನಡೆಯಬೇಕಿರುವ ಏಷ್ಯಾ ಕಪ್‌ಗೆ ತೆರಳಲು ಬಿಸಿಸಿಐ ಸಿದ್ಧವಿಲ್ಲ. ಆ ದೇಶಕ್ಕೆ ಹೋಗಲು ಸಾಧ್ಯವಿಲ್ಲ, ತಟಸ್ಥ ತಾಣದಲ್ಲಿ ನಡೆಸಿ ಎನ್ನುವುದು ಬಿಸಿಸಿಐ ಅಭಿಪ್ರಾಯ. ಆದರೆ ಪಾಕಿಸ್ತಾನ ಮಾತ್ರ, ಭಾರತ ತನ್ನ ಪಂದ್ಯಗಳನ್ನು ಬೇಕಾದರೆ ಯುಎಇಯಲ್ಲಿ ಆಡಲಿ, ಉಳಿದ ಪಂದ್ಯಗಳು ಪಾಕ್‌ನಲ್ಲೇ ನಡೆಯಲಿ ಎನ್ನುತ್ತದೆ. ಯುಎಇಯಲ್ಲಿ ವಿಪರೀತ ಧಗೆ, ಅಲ್ಲಿ ಆಡಲು ಸಾಧ್ಯವೇ ಇಲ್ಲ ಎಂದು ಶ್ರೀಲಂಕಾ, ಬಾಂಗ್ಲಾ ದೇಶಗಳು ಹೇಳಿವೆ. ಪಾಕ್‌ಗೆ ಸಿಟ್ಟು ಬರಿಸಿರುವುದು ಈ ಅಂಶ! ಆದ್ದರಿಂದಲೇ ನೀವು ಒಪ್ಪದಿದ್ದರೆ ನಿಮ್ಮ ನೆಲದಲ್ಲಿ ನಡೆಯಬೇಕಿರುವ ಟೆಸ್ಟ್ ಸರಣಿಗೆ ನಾವು ಬರುವುದಿಲ್ಲ ಎಂದು ಹೇಳಿದೆ. ಸದ್ಯ ಭಾರತಕ್ಕೂ ಬೆದರಿಕೆಯೊಡ್ಡಿರುವ ಪಿಸಿಬಿ, ಏಷ್ಯಾ ಕಪ್‌ಗೆ ಭಾರತ ಬರದಿದ್ದರೆ, ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ಪಾಕ್ ಬರಲ್ಲ ಎಂದಿದೆ!
ಐಸಿಸಿ ಆದಾಯ ಹಂಚಿಕೆಗೆ ಅಸಮಾಧಾನ: ಐಸಿಸಿಯ ನೂತನ ಆದಾಯ ಹಂಚಿಕೆ ನೀತಿಗೆ ಪಾಕಿಸ್ತಾನ ಅಸಮಾಧಾನ ವ್ಯಕ್ತಪಡಿಸಿದೆ. ಇನ್ನು ವಾರ್ಷಿಕವಾಗಿ ಐಸಿಸಿಯಿಂದ ಬಿಸಿಸಿಐಗೆ ಶೇ.38.5ರಷ್ಟು (1900 ಕೋ.ರೂ.) ಹಣ ಬರುವ ನಿರೀಕ್ಷೆಯಿದೆ. ಇನ್ನು ಇಂಗ್ಲೆಂಡ್, ಆಸ್ಟ್ರೇಲಿಯಗಳಿಗೆ ಕ್ರಮವಾಗಿ ಶೇ. 6.89, 6.25ರಷ್ಟು ಹಣ ಸಿಗಲಿದೆ. ಪಾಕ್‌ಗೂ ಆಸುಪಾಸು ಇಷ್ಟೇ ಹಣ ಸಿಗಲಿದೆ. ಇದು ಪಾಕ್‌ಗೆ ಸಿಟ್ಟು ಬರಿಸಿದೆ. ಸದ್ಯ ಇದಿನ್ನೂ ಅಂತಿಮಗೊಂಡಿಲ್ಲ. ಅಷ್ಟರಲ್ಲಾಗಲೇ ಪಿಸಿಬಿ ಹೀಗೆ ಅಂಕಿಸಂಖ್ಯೆಗಳನ್ನು ಸಿದ್ಧ ಮಾಡಲು ಹೇಗೆ ಸಾಧ್ಯ? ಸದ್ಯದ ಪರಿಸ್ಥಿತಿಯ ಬಗ್ಗೆ ನಮಗೆ ಸಂತೋಷವಿಲ್ಲ. ಈ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಸಿಕ್ಕದಿದ್ದರೆ, ನಾವದಕ್ಕೆ ಒಪ್ಪಿಗೆ ಕೊಡುವುದಿಲ್ಲ ಎಂದು ಪಾಕ್ ಹೇಳಿದೆ.