Advertisement

ಬಾಂಗ್ಲಾ ಬೇಟೆಯಾಡಿದ ಬರ್ತ್‌ಡೇ ಬಾಯ್‌ ರಶೀದ್‌

06:00 AM Sep 22, 2018 | Team Udayavani |

ಅಬುಧಾಬಿ: ರಶೀದ್‌ ಖಾನ್‌ ತಮ್ಮ 20ನೇ ಹುಟ್ಟುಹಬ್ಬವನ್ನು ಸ್ಮರಣೀಯಗೊಳಿಸಿದ್ದಾರೆ. ಏಶ್ಯ ಕಪ್‌ ಕೂಟದ ಬಾಂಗ್ಲಾದೇಶ ವಿರುದ್ಧದ ಅಂತಿಮ ಗ್ರೂಪ್‌ ಪಂದ್ಯದಲ್ಲಿ ಅಮೋಘ ಆಲ್‌ರೌಂಡ್‌ ಪ್ರದರ್ಶನವಿತ್ತ ಅವರು ಆಫ್ಘಾನಿಸ್ಥಾನದ 136 ರನ್ನುಗಳ ಭರ್ಜರಿ ಗೆಲುವಿನ ರೂವಾರಿಯಾಗಿ ಮೂಡಿಬಂದರು.

Advertisement

ಗುರುವಾರ ರಾತ್ರಿ ಅಬು ಧಾಬಿಯಲ್ಲಿ ನಡೆದ “ಬಿ’ ವಿಭಾಗದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ 7 ವಿಕೆಟಿಗೆ 255 ರನ್‌ ಗಳಿಸಿದರೆ, ಬಾಂಗ್ಲಾದೇಶ 42.1 ಓವರ್‌ಗಳಲ್ಲಿ 119ಕ್ಕೆ ಕುಸಿಯಿತು. ರಶೀದ್‌ ಖಾನ್‌ 32 ಎಸೆತಗಳಿಂದ 57 ರನ್‌ (8 ಬೌಂಡರಿ, 1 ಸಿಕ್ಸರ್‌) ಬಾರಿಸಿದ ಬಳಿಕ ಕೇವಲ 13 ರನ್ನಿತ್ತು 2 ವಿಕೆಟ್‌ ಉಡಾಯಿಸಿದರು. 9 ಓವರ್‌ಗಳ “ಟೈಟ್‌ ಸ್ಪೆಲ್‌’ನಲ್ಲಿ 3 ಓವರ್‌ಗಳನ್ನು ಮೇಡನ್‌ ಮಾಡಿದ್ದರು. ಬಾಂಗ್ಲಾ ಆಟಗಾರ ಅಬು ಹೈದರ್‌ ಅವರನ್ನು ರನೌಟ್‌ ಮಾಡುವ ಮೂಲಕವೂ ಗಮನ ಸೆಳೆದರು. ಅವರ ಈ ಆಲ್‌ರೌಂಡ್‌ ಪ್ರದರ್ಶನಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

ಈ ಜಯದೊಂದಿಗೆ ಅಫ್ಘಾನಿಸ್ಥಾನ “ಬಿ’ ವಿಭಾಗದ ಅಗ್ರಸ್ಥಾನಿ ಎನಿಸಿಕೊಂಡಿತು. ಇದಕ್ಕೂ ಮುನ್ನ ಅದು ಶ್ರೀಲಂಕಾವನ್ನು 91 ರನ್ನುಗಳಿಂದ ಮಣಿಸಿತ್ತು.

ಕುಸಿಯುತ್ತ ಹೋದ ಬಾಂಗ್ಲಾ
ಚೇಸಿಂಗ್‌ ವೇಳೆ ಭಾರೀ ಕುಸಿತ ಅನುಭವಿಸಿದ ಬಾಂಗ್ಲಾದೇಶ 17 ರನ್‌ ಆಗುವಷ್ಟರಲ್ಲಿ ಆರಂಭಿಕರಿಬ್ಬ ರನ್ನು ಕಳೆದುಕೊಂಡಿತು. ಈ ಆಘಾತ ದಿಂದ ಹೊರಬರಲು ಬಾಂಗ್ಲಾಕ್ಕೆ ಸಾಧ್ಯ ವಾಗಲೇ ಇಲ್ಲ. 

ಶಕಿಬ್‌ 4 ವಿಕೆಟ್‌, 32 ರನ್‌
4 ವಿಕೆಟ್‌ ಕಿತ್ತು ಮಿಂಚಿದ ಶಕಿಬ್‌ ಅಲ್‌ ಹಸನ್‌ ಬ್ಯಾಟಿಂಗಿನಲ್ಲೂ ಸಣ್ಣದೊಂದು ಹೋರಾಟ ಪ್ರದರ್ಶಿಸಿ ಸರ್ವಾಧಿಕ 32 ರನ್‌ ಮಾಡಿದರು. ಮಹಮದುಲ್ಲ 27, ಮೊಸದೆಕ್‌ ಹೊಸೇನ್‌ 26 ರನ್‌ ಗಳಿಸಿದರು. ಈ ಮೂವರನ್ನು ಹೊರತುಪಡಿಸಿದರೆ ಉಳಿದವರ್ಯಾರೂ ಎರಡಂಕೆಯ ಸ್ಕೋರ್‌ ದಾಖಲಿಸಲಿಲ್ಲ.

Advertisement

ಸಂಕ್ಷಿಪ್ತ ಸ್ಕೋರ್‌ ಅಫ್ಘಾನಿಸ್ಥಾನ-7 ವಿಕೆಟಿಗೆ 255 (ಶಾಹಿದಿ 58, ರಶೀದ್‌ ಔಟಾಗದೆ  57, ನೈಬ್‌ 42, ಶಕಿಬ್‌ 42ಕ್ಕೆ 4, ಹೈದರ್‌ 50ಕ್ಕೆ 2). ಬಾಂಗ್ಲಾದೇಶ-42.1 ಓವರ್‌ಗಳಲ್ಲಿ 119 (ಶಕಿಬ್‌ 32, ಮಹಮದುಲ್ಲ 27, ಮೊಸದೆಕ್‌ ಔಟಾಗದೆ 26, ರಶೀದ್‌ 13ಕ್ಕೆ 2, ಮುಜೀಬ್‌ 22ಕ್ಕೆ 2, ನೈಬ್‌ 30ಕ್ಕೆ 2). 
ಪಂದ್ಯಶ್ರೇಷ್ಠ: ರಶೀದ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next