ಬೆಂಗಳೂರು: ಕರ್ತವ್ಯ ನಿರ್ವಹಣೆ ವೇಳೆ ಆಟೋರಿಕ್ಷಾ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ಎಎಸ್‌ಐ) ಮಂಗಳವಾರ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.
ನಾಗರಾಜು (56) ಮೃತ ಎಎಸ್‌ಐ. ಭಾನು ವಾರ ಚಾಲುಕ್ಯ ವೃತ್ತದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಆಟೋರಿಕ್ಷಾ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು.
ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಏರ್‌ಪೋರ್ಟ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮಿದುಳು ನಿಷ್ಕ್ರಿಯಗೊಂಡು ನಾಗ ರಾಜು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಎಎಸ್‌ಐ ನಾಗರಾಜು ಭಾನುವಾರ ಚಾಲುಕ್ಯ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನ 4ರ ಸುಮಾರಿಗೆ ಅರಮನೆ ರಸ್ತೆಯಲ್ಲಿ ಸಿಐಡಿ ಕಚೇರಿ ಕಡೆಯಿಂದ ಚಾಲುಕ್ಯ ವೃತ್ತಕ್ಕೆ ವೇಗವಾಗಿ ಬಂದ ಆಟೋರಿಕ್ಷಾ ಚಾಲಕ ಶಿವಕುಮಾರ್ ಎಎಸ್‌ಐ ನಾಗರಾಜ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ನಾಗರಾಜು ಏಳೆಂಟು ಅಡಿ ಮುಂದಕ್ಕೆ ಹಾರಿ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಬಳಿಕ ಆಟೋರಿಕ್ಷಾದೊಂದಿಗೆ ಪರಾರಿಯಾಗುತ್ತಿದ್ದ ಚಾಲಕ ಶಿವಕುಮಾರ್‌ನನ್ನು ಪೊಲೀಸರು ಸ್ಥಳೀಯರ ನೆರವಿನಿಂದ ಬಂಧಿಸಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಅಂಗಾಂಗ ದಾನ : ಮೃತ ಎಎಸ್‌ಐ ನಾಗರಾಜು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಿದುಳು ನಿಷ್ಕ್ರಿಯ ಗೊಂಡು ನಿಧನರಾದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ನಾಗರಾಜು ಅವರ ಅಂಗಾಂಗ ದಾನ ಮಾಡುವ ಮೂಲಕ ದುಃಖದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.