Advertisement

ನಂ.1 ಡಬಲ್ಸ್‌ ತಾರೆಯರಾದ ಅಶ್ವಿ‌ನಿ, ಶಿಖಾಗೇಕಿಲ್ಲ ಸ್ಥಾನ ?

10:00 AM Dec 02, 2019 | Sriram |

ಬೆಂಗಳೂರು: ಭಾರತ ಬ್ಯಾಡ್ಮಿಂಟನ್‌ ತಂಡದ ಆಯ್ಕೆ ಪ್ರಕ್ರಿಯೆ ಯಲ್ಲಿ ಎಲ್ಲವೂ ಸರಿಯಿದೆಯಾ?

Advertisement

ಹೀಗೊಂದು ಅನುಮಾನ ಮೂಡಿದೆ. ಇದಕ್ಕೆ ಕಾರಣ ರವಿವಾರ
ದಿಂದ ನೇಪಾಲದಲ್ಲಿ ಆರಂಭವಾಗುವ ದಕ್ಷಿಣ ಏಷ್ಯನ್‌ ಗೇಮ್ಸ್‌ಗೆ ಆಯ್ಕೆ ಯಾಗಿರುವ ಭಾರತ ಬ್ಯಾಡ್ಮಿಂಟನ್‌ ತಂಡ. ಇದರಲ್ಲಿ ದೇಶದ ನಂ.1 ಡಬಲ್ಸ್‌ ಬ್ಯಾಡ್ಮಿಂಟನ್‌ ಆಟಗಾರ್ತಿಯರಾದ ಕರ್ನಾಟಕದ ಪುತ್ತೂರು ಮೂಲದ ಅಶ್ವಿ‌ನಿ ಭಟ್‌ ಹಾಗೂ ಶಿಖಾ ಗೌತಮ್‌ರನ್ನು ಕೈಬಿಡಲಾಗಿದೆ. ಹೈದರಾಬಾದ್‌ನಲ್ಲಿರುವ ಗೋಪಿಚಂದ್‌ ಅಕಾಡೆಮಿ ಯಲ್ಲಿ ತರಬೇತಿ ಪಡೆದ 8 ಮಂದಿ ಯನ್ನು ಆಯ್ಕೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲ ವಿಶ್ವದಲ್ಲಿ 203ನೇ ಶ್ರೇಯಾಂಕದಲ್ಲಿರುವ ಗೋಪಿಚಂದ್‌ ಪುತ್ರಿ, 16ರ ಹರೆಯದ ಗಾಯತ್ರಿಗೂ ಸ್ಥಾನ ಸಿಕ್ಕಿದೆ. 135ನೇ ಸ್ಥಾನ ಪಡೆದಿ ರುವ ರಾಜ್ಯದ ಇಬ್ಬರು ಪ್ರತಿಭಾನ್ವಿತೆಯರಿಗೆ ಮಾತ್ರ ಸ್ಥಾನ ಸಿಕ್ಕಿಲ್ಲ.

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ (ಬಿಎಐ) ಈ ನಿರ್ಧಾರ ವ್ಯಾಪಕ ಟೀಕೆಗೆ ಕಾರಣವಾಗಿದೆ. ಯಾವ ಆಧಾರದಲ್ಲಿ ತಂಡವನ್ನು ರಚಿಸಿದ್ದೀರಿ? ಪ್ರತಿಭಾವಂತರಿಗೆ ಏಕೆ ಅನ್ಯಾಯ ಎಸಗಿದ್ದೀರಿ? ಎಂದು ಮಹಾರಾಷ್ಟ್ರದ ಪ್ರತಿಭಾವಂತ ಬ್ಯಾಡ್ಮಿಂಟನ್‌ ಆಟಗಾರ್ತಿ ಪ್ರಜಕ್ತಾ ಸಾವಂತ್‌ ಕಟುವಾಗಿ ಪ್ರಶ್ನಿಸಿದ್ದಾರೆ. ಸ್ವತಃ ಪ್ರಜಕ್ತಾ ಈ ರೀತಿಯ ಅನ್ಯಾಯಗಳ ವಿರುದ್ಧ ದೀರ್ಘ‌ಕಾಲದಿಂದ ಹೋರಾಡುತ್ತಿದ್ದಾರೆ.

ಗೌಪ್ಯವಾಗಿ ತಂಡ ರಚನೆ?
ಭಾರತ ತಂಡವನ್ನು ಗೌಪ್ಯವಾಗಿ ರಚಿಸಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಗಳ ಬಗ್ಗೆ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯನ್ನು “ಉದಯವಾಣಿ’ ಸಂಪರ್ಕಿಸಿದಾಗ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಕಾರ್ಯದರ್ಶಿ ರಾಜೇಶ್‌ ತಿಳಿಸಿದ್ದಾರೆ.

11ರಲ್ಲಿ 8 ಮಂದಿ ಗೋಪಿಚಂದ್‌ ಅಕಾಡೆಮಿಯವರು!
ದಕ್ಷಿಣ ಏಷ್ಯನ್‌ ಕೂಟಕ್ಕೆ ಆರಿಸಿದ ಬ್ಯಾಡ್ಮಿಂಟನ್‌ ತಂಡದಲ್ಲಿ 11 ಮಂದಿಯಿದ್ದಾರೆ. ಇದರಲ್ಲಿ 8 ಮಂದಿ ಗೋಪಿಚಂದ್‌ ಅಕಾಡೆಮಿಯವರೇ ಆಗಿದ್ದಾರೆ.! ಸೌರಭ್‌ ವರ್ಮ, ಸಿರಿಲ್‌ ವರ್ಮ, ಗಾಯತ್ರಿ ಗೋಪಿಚಂದ್‌, ಉತ್ಕರ್ಷ ರಾವ್‌, ಮೇಘನಾ ಜಕ್ಕಂಪುಡಿ, ಕುಹೂ ಗರ್ಗ್‌, ಅನುಷ್ಕಾ ಪಾರೀಖ್‌, ಶ್ರಿಯಾಂಶಿ ಪ್ರದೇಶಿ ಅವರು ಗೋಪಿಚಂದ್‌ ಅಕಾಡೆಮಿಯ ಆಟಗಾರರು. ಉಳಿದಂತೆ ಲಕ್ಷ್ಯಸೇನ್‌ ಹಾಗೂ ಸಿದ್ಧಾರ್ಥ್ ಪ್ರತಾಪ್‌ ಅವರು ಪ್ರಕಾಶ್‌ ಪಡುಕೋಣೆ ಅಕಾಡೆಮಿಯವರಾಗಿದ್ದಾರೆ. ಆಕರ್ಷಿ ಕಶ್ಯಪ್‌, ಹೈದರಾಬಾದ್‌ನ ಸುಚಿತ್ರಾ ಅಕಾಡೆಮಿಯ ಆಟಗಾರ್ತಿ.

Advertisement

ವರ್ಷದಲ್ಲಿ 3 ಪ್ರಶಸ್ತಿ ಗೆದ್ದ ಅಶ್ವಿ‌ನಿ-ಶಿಖಾ
ಡಬಲ್ಸ್‌ನಲ್ಲಿ ದೇಶದ ನಂ.1 ಆಟಗಾರ್ತಿಯಾಗಿರುವ ರಾಜ್ಯದ ಅಶ್ವಿ‌ನಿ ಭಟ್‌ ಹಾಗೂ ಶಿಖಾ ಗೌತಮ್‌ ತಂಡದಲ್ಲಿ ಸ್ಥಾನ ಪಡೆಯದಿರುವ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿವೆ. ಫೆಬ್ರವರಿಯಲ್ಲಿ ಗುವಾಹಾಟಿಯಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಮಹಿಳಾ ಡಬಲ್ಸ್‌ ಟ್ರೋಫಿಯನ್ನು ಈ ಜೋಡಿ ಗೆದ್ದಿತ್ತು. ಇದು ಕರ್ನಾಟಕಕ್ಕೆ 20 ವರ್ಷಗಳ ಬಳಿಕ ಸಿಕ್ಕಿರುವ ಪ್ರಶಸ್ತಿ. ಇದಾದ ಬಳಿಕ ಜುಲೈಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಶ್ರೇಯಾಂಕ ಕೂಟದಲ್ಲೂ ಇದೇ ಜೋಡಿ ಪ್ರಶಸ್ತಿ ಗೆದ್ದಿತ್ತು. ಇತ್ತೀಚೆಗೆ ಪುಣೆಯಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಬ್ಯಾಡ್ಮಿಂಟನ್‌ ಕೂಟದಲ್ಲೂ ಗೆದ್ದಿತ್ತು. ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿ ಜಯಿಸಿದ್ದರು.

ದಕ್ಷಿಣ ಏಷ್ಯನ್‌ ಬ್ಯಾಡ್ಮಿಂಟನ್‌ ಕುರಿತಾಗಿ ಆಟಗಾರರ ಆಯ್ಕೆ ನಡೆಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. -ರಾಜೇಶ್‌, ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ ಕಾರ್ಯದರ್ಶಿ

-ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next