ನೀವೇನಾದರೂ ಮಹಾಭಾರತದ ಬಗ್ಗೆ ಕೇಳಿದ್ದರೆ, “ಅಶ್ವತ್ಥಾಮ’ ಎನ್ನುವ ಹೆಸರೂ ನಿಮಗೆ ಗೊತ್ತಿರುತ್ತದೆ. ಚಿರಂಜೀವಿಗಳಲ್ಲಿ ಒಬ್ಬರಾದ “ಅಶ್ವತ್ಥಾಮ’ನ ಬಗ್ಗೆ ಪುರಾಣ – ಪುಣ್ಯಕಥೆಗಳಲ್ಲಿ ಸಾಕಷ್ಟು ಉಲ್ಲೇಖವಿದೆ. ಈಗ ಇದೇ “ಅಶ್ವತ್ಥಾಮ’ನಿಗೆ ಸಿನಿಮಾ ರೂಪ ನೀಡಲು ಹೊರಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.
ಹೌದು, ಮಹಾಭಾರತ ಮತ್ತಿತರ ಪುರಾಣ – ಪುಣ್ಯ ಕಥೆಗಳಲ್ಲಿ ಬರುವ “ಅಶ್ವತ್ಥಾಮ’ನ ಬಗ್ಗೆ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ ಅನೂಪ್ ಭಂಡಾರಿ. ಸದ್ಯಕ್ಕೆ ಸುದೀಪ್ ಅಭಿನಯದ “ಫ್ಯಾಂಟಮ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿರುವ ಅನೂಪ್, ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಹೊಸಕಥೆಯೊಂದನ್ನು ರೆಡಿ ಮಾಡಿದ್ದಾರೆ. ಅದಕ್ಕೆ “ಅಶ್ವತ್ಥಾಮ’ ಎಂದು ಹೆಸರಿಟ್ಟಿದ್ದಾರೆ. ಮಹಾಭಾರತದಲ್ಲಿ ಬರುವ ಚಿರಂಜೀವಿ “ಅಶ್ವತ್ಥಾಮ’ನಎಳೆಯನ್ನು ಇಟ್ಟುಕೊಂಡು, ಅದನ್ನು ಇಂದಿನ ಜನರೇಶನ್‌ಗೆ ಕನೆಕ್ಟ್ ಆಗುವ ರೀತಿಯಲ್ಲಿ ತೆರೆಮೇಲೆ ಹೇಳಲು ಹೊರಟಿದ್ದಾರಂತೆ ಅನೂಪ್ ಭಂಡಾರಿ.
ಈ ಬಗ್ಗೆ ಮಾತನಾಡುವ ಅನೂಪ್ ಭಂಡಾರಿ, “ನಾವೆಲ್ಲ ಮಹಾಭಾರತದಲ್ಲಿ ಬರುವ ಅಶ್ವತ್ಥಾಮನ ಬಗ್ಗೆ ಕೇಳಿರುತ್ತೀವಿ. ಚಿರಂಜೀವಿ ಎಂದು ಹೇಳಲಾಗುವ ಅಶ್ವತ್ಥಾಮನ ಬಗ್ಗೆಹಲವು ಕಥೆಗಳಿವೆ. ಇಂದಿಗೂ ಅಶ್ವತ್ಥಾಮ ಬದುಕಿದ್ದಾನೆ. ಅವನನ್ನು ನೋಡಿದ್ದೇವೆ ಎಂದು ಹೇಳುವವರು ಇದ್ದಾರೆ.ಹಾಗಾದ್ರೆ, ನಿಜವಾಗಿಯೂ ಅಶ್ವತ್ಥಾಮ ಇಂದಿಗೂ ಬದುಕಿದ್ದಾನಾ? ಬದುಕಿದ್ದರೆ, ಅಶ್ವತ್ಥಾಮ ಹೇಗಿರಬಹುದು?ಇವತ್ತಿನ ಆಧುನಿಕ ಜಗತ್ತನ್ನು ಆಗ ಹೇಗೆ ನೋಡುತ್ತಿರಬಹುದು? ಹೀಗೆ ಹಿಂದಿನ ಮತ್ತು ಇಂದಿನ ಅನೇಕ ಸಂಗತಿಗಳ ಸುತ್ತ ಈ ಕಥೆ ನಡೆಯುತ್ತದೆ’ ಎನ್ನುತ್ತಾರೆ.ಅನೂಪ್ ಭಂಡಾರಿ ಹೇಳುವಂತೆ, “ಅಶ್ವತ್ಥಾಮ’ ಒಂದು ಆ್ಯಕ್ಷನ್ ಕಂ ಅಡ್ವೆಂಚರ್ – ಥ್ರಿಲರ್ ಶೈಲಿಯ ಸಿನಿಮಾವಂತೆ. “ಇಂದಿನ ಆಡಿಯನ್ಸ್ ಅಯಸುವಂಥ ಕಂಟೆಂಟ್ ಈ ಸಿನಿಮಾ ದಲ್ಲಿರುತ್ತದೆ. ಸಿನಿಮಾದ ಕಥೆ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ನಡೆಯುತ್ತದೆ. ಜೊತೆಗೆ ಮಹಾಭಾರತದ ಕಥೆಯಲ್ಲಿನ ಒಂದಷ್ಟು ಉಲ್ಲೇಖಗಳೂ ಬರುತ್ತದೆ. ನಾನು ಸಾಮಾನ್ಯವಾಗಿ ಫ್ರೀ ಇದ್ದಾಗ ಹೊಸ ಹೊಸ ಕಥೆಗಳನ್ನು ಮಾಡುತ್ತಿರುತ್ತೇನೆ. “ಅಶ್ವತ್ಥಾಮ’ ಕೂಡ ಹಾಗೇ ಮಾಡಿದ ಒಂದು ಕಥೆ. ಇದರಲ್ಲಿ ಆ್ಯಕ್ಷನ್, ಅಡ್ವೆಂಚರ್, ಥ್ರಿಲ್ಲರ್ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಇರಲಿದೆ’ ಎಂದು ಮಾಹಿತಿ ಕೊಡುತ್ತಾರೆ ಅನೂಪ್ .
ಇನ್ನು “ಅಶ್ವತ್ಥಾಮ’ ಚಿತ್ರದ ಕಥೆ ಕೇಳಿರುವ ನಟ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೆ ತಮ್ಮ “ಕಿಚ್ಚ ಕ್ರಿಯೇಶನ್ಸ್’ ಬ್ಯಾನರ್ ಮೂಲಕ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಅನೂಪ್ ಭಂಡಾರಿ, “ಈಗಷ್ಟೇ “ಅಶ್ವತ್ಥಾಮ’ ಸ್ಟೋರಿಯ ಫಸ್ಟ್ ಡ್ರಾಫ್ಟ್ ಆಗಿದೆ. ನಾನು ಇನ್ನೂ ಸುದೀಪ್ ಅವರಿಗೆ ಇಡೀ ಸಿನಿಮಾದ ಕಥೆ ಹೇಳಿಲ್ಲ.ಸ್ಟೋರಿಯ ಒನ್ ಲೈನ್ ಸ್ಟೋರಿ ಕೇಳಿದ ಸುದೀಪ್ ಖುಷಿಯಾಗಿದ್ದಾರೆ. ಇದನ್ನು ತಮ್ಮದೇ ಬ್ಯಾನರ್‌ನಲ್ಲಿ ಮಾಡೋಣ ಅಂಥ ಸಿನಿಮಾವನ್ನೂ ಅನೌನ್ಸ್ ಮಾಡಿದ್ದಾರೆ. ಜೊತೆಗೆ ಸಿನಿಮಾದ ಟೈಟಲ್ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದೇವೆ’ ಎಂದಿದ್ದಾರೆ. ಮತ್ತೂಂದೆಡೆ, “ಅಶ್ವತ್ಥಾಮ’ ಶುರುವಾಗೋದು ಯಾವಾಗ ಎಂಬ ಪ್ರಶ್ನೆಗೆ, “ಫ್ಯಾಂಟಮ್’ ಚಿತ್ರ
ಮೊದಲು ಮುಗಿಯಬೇಕು ಎನ್ನುತ್ತಾರೆ ಅನೂಪ್. “ಸದ್ಯ ನಮ್ಮ ಗಮನ “ಫ್ಯಾಂಟಮ್’ ಸಿನಿಮಾದ ಕಡೆಗಿದೆ. ಸಿನಿಮಾ ತುಂಬ ಚೆನ್ನಾಗಿ ಬರುತ್ತಿದ್ದು, ನಮಗೆ “ಫ್ಯಾಂಟಮ್’ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಹಾಗಾಗಿ ಮೊದಲು “ಫ್ಯಾಂಟಮ್’ ಸಿನಿಮಾ ಮುಗಿಯಬೇಕು. ಆನಂತರ “ಅಶ್ವತ್ಥಾಮ’ ಸಿನಿಮಾದ ಕೆಲಸಗಳು ಶುರುವಾಗಲಿದೆ. ನಮ್ಮ ಪ್ಲಾನ್ ಪ್ರಕಾರ ಮುಂದಿನ ವರ್ಷದ ವೇಳೆಗೆ ಈ ಸಿನಿಮಾದ ಕೆಲಸಗಳು ಶುರುವಾಗಬಹುದು’ ಎನ್ನುವುದು ಅನೂಪ್ ಮಾತು.