ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್ ಗಾಂಧಿ ರಾಜೀನಾಮೆ ಹಿಂಪಡೆಯಲು ಒಪ್ಪುತ್ತಿಲ್ಲದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್,ರನ್ನು ನೇಮಿಸುವ ಬಗ್ಗೆ ಕಾಂಗ್ರೆಸ್ ಮುಖಂಡರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಗೆಹ್ಲೋಟ್, ರಾಜಸ್ಥಾನ ಸಿಎಂ ಆಗಿ ಮುಂದುವರಿಯಬಹುದಾಗಿದ್ದು, ಹಲವು ಬಾರಿ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಆ ಹುದ್ದೆ ನಿಭಾಯಿಸಿದ ಅನುಭವವಿದೆ. ಹೀಗಾಗಿ ಗೆಹ್ಲೋಟ್, ಆಯ್ಕೆ ಸೂಕ್ತ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.
ಯಾರು ಪಕ್ಷದ ಅಧ್ಯಕ್ಷರಾಗಬೇಕು ಎಂಬ ಕುರಿತಾಗಿ ಕಾಂಗ್ರೆಸ್‌ನಲ್ಲಿ ಭಾರೀ ಚರ್ಚೆ, ಮಾತುಕತೆ ಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ನೆಹರೂ ಕುಟುಂಬ ಕೂಡ ಗೆಹ್ಲೋಟ್‌ಗೆ ಪಕ್ಷದ ಉಸ್ತುವಾರಿ ವಹಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಹೊಂದಿದೆ ಎನ್ನಲಾಗಿದೆ. ಕಳೆದ ತಿಂಗಳು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ, ಅನಂತರ ನಡೆದ ಕಾರ್ಯಕಾರಿಣಿಯಲ್ಲಿ ರಾಹುಲ್ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ರಾಹುಲ್ ಮನವೊಲಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರಾದರೂ ರಾಹುಲ್ ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೊಸ ಮುಖ್ಯಸ್ಥರನ್ನು ಹುಡುಕುವ ಕೆಲಸವೂ ನಡೆದಿದೆ.
ರಾಹುಲ್ ವಿರುದ್ಧ ದೂರು
ಅಂತಾರಾಷ್ಟ್ರೀಯ ಯೋಗ ದಿನದಂದು ಸೇನೆಯ ಶ್ವಾನ ವಿಭಾಗ ಟ್ವೀಟ್ ಮಾಡಿದ್ದ ಶ್ವಾನಯೋಗದ ಫೋಟೋವನ್ನು “ಇದು ನವ ಭಾರತ’ ಎಂದು ವ್ಯಂಗ್ಯವಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಕೀಲ ಅಟಲ್ ಬಿಹಾರಿ ದುಬೆ ಎಂಬವರು ದಿಲ್ಲಿಯ ಸ್ಥಳೀಯ ನ್ಯಾಯಾಲಯವೊಂದರಲ್ಲಿ ದೂರು ದಾಖಲಿಸಿದ್ದಾರೆ.