Advertisement

ಗೆಹ್ಲೊಟ್‌ ಸಿಎಂ, ಪೈಲಟ್‌ ಡಿಸಿಎಂ

07:05 AM Dec 15, 2018 | Karthik A |

ಹೊಸದಿಲ್ಲಿ: ಮಧ್ಯಪ್ರದೇಶದ ಬಳಿಕ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದ್ದ ರಾಜಸ್ಥಾನದಲ್ಲೂ ನಾಯಕನ ಆಯ್ಕೆ ವಿಚಾರ ಬಗೆಹರಿದಿದೆ. ಕಾಂಗ್ರೆಸ್‌ನ ಹಿರಿಯ ತಲೆಯಾಳು, ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ನೂತನ ಮುಖ್ಯಮಂತ್ರಿಯಾದರೆ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಸತತ ಸಮಾಲೋಚನೆ, ಸಭೆ ಬಳಿಕ ಕರ್ನಾಟಕದ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಘೋಷಿಸಿದ್ದಾರೆ.

Advertisement

ಸಿಎಂ ಸ್ಥಾನಕ್ಕೆ ಗೆಹ್ಲೊಟ್‌ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಜೈಪುರದಲ್ಲಿ ಅವರ ಬೆಂಬಲಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ 17ರಂದು ಗೆಹ್ಲೊಟ್‌ ಹಾಗೂ ಪೈಲಟ್‌ ಪ್ರಮಾಣ ಸ್ವೀಕರಿಸಲಿದ್ದಾರೆ. ಇದೇ ವೇಳೆ, ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ನೇಮಕಗೊಂಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್‌ನಾಥ್‌ ಅವರೂ 17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ಮೊದಲ ಬಾರಿಯ ಶಾಸಕರು:
ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಅರ್ಧಕ್ಕಿಂತ ಹೆಚ್ಚಿನ ಶಾಸಕರು ಮೊದಲ ಬಾರಿ ಚುನಾವಣೆಯಲ್ಲಿ ಗೆದ್ದವರು. 26 ಸ್ಥಾನಗಳನ್ನು ಗೆದ್ದು ಸರಕಾರ ರಚಿಸಲಿರುವ ಮಿಜೋ ನ್ಯಾಷನಲ್‌ ಫ್ರಂಟ್‌ (ಎಂಎನ್‌ಎಫ್) ನಲ್ಲಿ 14 ಮಂದಿ ಹೊಸಬರು ಇದ್ದಾರೆ. ಝೊರಾಮ್‌ ಪೀಪಲ್ಸ್‌ ಪಾರ್ಟಿಯ 8 ಮಂದಿಯ ಪೈಕಿ ಐವರು ಮೊದಲ ಬಾರಿಗೆ ಚುನಾವಣೆ ಗೆದ್ದಿದ್ದಾರೆ. ಕಾಂಗ್ರೆಸ್‌ನ ಐವರ ಪೈಕಿ ಒಬ್ಬರು ನೂತನವಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಗೆದ್ದವರ ಪೈಕಿ ಚಂಪೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಲಾಲ್ತನ್‌ ಹಾವ್ಲಾರನ್ನು ಸೋಲಿಸಿದ ಎಂಎನ್‌ಎಫ್ನ ಟಿ.ಜೆ. ಲಾಲ್ನುನ್‌ಟ್ಯುಂಗಾ ಅವರೂ ಒಬ್ಬರು.

ತಂದೆಯಂತೆ ಮಗನಿಗೂ ತಪ್ಪಿತು ಹುದ್ದೆ
ಮೂವತ್ತು ವರ್ಷಗಳ ಹಿಂದೆ ಕಾಂಗ್ರೆಸ್‌ ನಾಯಕ ದಿ.ಮಾಧವ ರಾವ್‌ ಸಿಂಧಿಯಾಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನ ನಿರಾಕರಿಸಲಾಗಿತ್ತು. ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾಗೆ ಕೂಡ ಹಾಲಿ ವರ್ಷ ಸಿಎಂ ಸ್ಥಾನ ತಪ್ಪಿದೆ. 1989ರಲ್ಲಿ ಮಾಧವ ರಾವ್‌ರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಲು ನಿರ್ಧರಿಸಲಾಗಿತ್ತು. ಮತ್ತೂಬ್ಬ ಹಿರಿಯ ನಾಯಕ ದಿ| ಅರ್ಜುನ್‌ ಸಿಂಗ್‌ರ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ರಾವ್‌ಗೆ ಸಿಎಂ ಹುದ್ದೆ ನಿರಾಕರಿಸಲಾಯಿತು. ಅನಂತರ ಮೋತಿಲಾಲ್‌ ವೋರಾರನ್ನು ನೇಮಿಸಲಾಯಿತು. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ‘ಮಾಫ್ ಕರೋ ಮಹರಾಜ್‌; ಅಪ್ನೇ ತೋ ಶಿವರಾಜ್‌’ ಎಂಬ ಘೋಷಣೆಯನ್ನು ತಮ್ಮ ವಿರುದ್ಧವೇ ರೂಪಿಸಿತ್ತು ಎಂಬ ಅಂಶವನ್ನು ಜ್ಯೋತಿರಾದಿತ್ಯ ಸಿಂಧಿಯಾ ಗಮನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next