Advertisement

ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಭೇಟಿ ಸಂದರ್ಭ ಗೋವಾದಿಂದ ದುರುದ್ದೇಶ: ಅಶೋಕ ಚಂದರಗಿ

03:04 PM Mar 21, 2021 | Team Udayavani |

ಬೆಳಗಾವಿ: ಮಹಾದಾಯಿ ನೀರು ಹಂಚಿಕೆಯ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ಆದೇಶದನ್ವಯ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನೀರಾವರಿ ಇಲಾಖೆಗಳ ಅಧಿಕಾರಿಗಳ ತ್ರಿಸದಸ್ಯ ಜಂಟಿ ಪರಿಶೀಲನಾ ಸಮಿತಿಯು ಖಾನಾಪುರ ಬಳಿಯ ಕಳಸಾ ಬಂಡೂರಿ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಘಟನಾವಳಿಗಳು ಗೋವಾದ ದುರುದ್ದೇಶವನ್ನು ಬಟಾಬಯಲುಗೊಳಿಸಿದ್ದು, ಇದನ್ನು ಕರ್ನಾಟಕ ಸರಕಾರವು ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ಎಂದು ಜಿಲ್ಲಾ ಕನ್ನಡದಲ್ಲಿ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆದಿರುವ ಅವರು ಮೂರೂ ರಾಜ್ಯಗಳ ಅಧಿಕಾರಿಗಳ ಸಮಿತಿಯ ಭೇಟಿಯ ಕಾಲಕ್ಕೆ ಗೋವಾದ ಅಧಿಕಾರಿಗಳು ತಮ್ಮೊಂದಿಗೆ ಪರಿಸರವಾದಿಗಳನ್ನು ಮತ್ತು ಪತ್ರಕರ್ತರನ್ನು ಕರೆತಂದಿದ್ದರು. ಉದ್ದೇಶಪೂರ್ವಕವಾಗಿಯೇ ಕರ್ನಾಟಕದ ಪೊಲೀಸರ ಜೊತೆಗೆ ವಾಗ್ವಾದದಲ್ಲಿ ತೊಡಗಿದ್ದಲ್ಲದೆ ಕರ್ನಾಟಕದ ಅಧಿಕಾರಿಗಳ ಜೊತೆಗೂ ವಾದ ನಡೆಸಿ ವಾಸ್ತವತೆಯ ಆಧಾರದ ಮೇಲೆ ವರದಿ ತಯಾರಿಸಲೂ ಸಹ ಸಿದ್ಧರಾಗಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮಾಡಬಾರದ ಕೆಲಸ ಮಾಡಿ ಕಾಂಗ್ರೆಸ್ ನವರಿಗೆ ಅಭ್ಯಾಸ: ಸಚಿವ ಕೆ.ಎಸ್. ಈಶ್ವರಪ್ಪ

ಸುಪ್ರೀಂ ಕೋರ್ಟ್ ಆದೇಶದನ್ವಯವೇ ನಿರ್ಮಿಸಲಾದ ತಡೆಗೋಡೆಯು ಭದ್ರವಾಗಿಯೇ ಇದೆಯೆಂಬ ವಾಸ್ತವವನ್ನು ಕಂಡರೂ ಸಹ ಅದನ್ನು ವರದಿಯಲ್ಲಿ ಪ್ರಸ್ತಾಪಿಸಲು ಸಿದ್ಧರಾಗದ ಗೋವಾ ಅಧಿಕಾರಿಗಳು ಗೋವಾದ ಮಾಧ್ಯಮಗಳಲ್ಲಿ ಕರ್ನಾಟಕದ ಅಧಿಕಾರಿಗಳ ವಿರುದ್ಧ ವರದಿಗಳು ಪ್ರಕಟವಾಗಲು ಕಾರಣರಾದರು ಎಂದು ಪತ್ರದಲ್ಲಿ ಹೇಳಿದ್ದಾರೆ.

ಕಳಸಾ ಬಂಡೂರಿ ಯೋಜನೆಯ ಅನುಷ್ಠಾನವನ್ನು ತಡೆಯುವ ಪ್ರಯತ್ನವಾಗಿ ವಿಳಂಬ ತಂತ್ರವನ್ನು ಅನುಸರಿಸುತ್ತಿರುವ ಗೋವಾ ತನ್ನ ತಂತ್ರಕ್ಕಾಗಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದೆ. ಈ ವಿಷಯವನ್ನು ಸರಕಾರ ಬರುವ ಎಪ್ರಿಲ್ ಮೊದಲ ವಾರ ನಡೆಯುವ ವಿಚಾರಣೆ ಕಾಲಕ್ಕೆ ನ್ಯಾಯಾಲಯದ ಗಮನಕ್ಕೆ ತರುವುದು ಒಳ್ಳೆಯದು ಎಂದು ಅಶೋಕ ಚಂದರಗಿ ಆಗ್ರಹಿದ್ದಾರೆ.

Advertisement

2010 ರಿಂದ 2018 ರವರೆಗೆ ಮಹಾದಾಯಿ ನ್ಯಾಯಮಂಡಳಿಯ ವಿಚಾರಣೆ ಕಾಲಕ್ಕೂ ಇದೇ ರೀತಿ ವಿಳಂಬ ತಂತ್ರವನ್ನು ಅನುಸರಿಸಿದ್ದ ಗೋವಾ ಈಗ ನ್ಯಾಯಾಲಯ ಮತ್ತು ಕೇಂದ್ರ ಸರಕಾರದ ವೇದಿಕೆಗಳನ್ನು ಬಳಸಿಕೊಂಡು ಯೋಜನೆಯ ಅನುಷ್ಠಾನವನ್ನು ತಡೆಯಲು ಯತ್ನಿಸುತ್ತಿದೆ. ಈ ಸಮಗ್ರ ವಿವರಗಳನ್ನು ನ್ಯಾಯಾಲಯದ ಗಮನಕ್ಕೆ ತರುವ ಮೂಲಕ ಗೋವಾ ಕುತಂತ್ರವನ್ನು ಬಯಲು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next