ಪ್ರಜ್ವಲ್ ದೇವರಾಜ್ ಅವರು ನಿರ್ದೇಶಕ ಪಿ.ಸಿ.ಶೇಖರ್ ಅವರ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಬಂದಿತ್ತು. ಇನ್ನೂ ಹೆಸರಿಡದ ಆ ಚಿತ್ರದಲ್ಲಿ ಪ್ರಜ್ವಲ್ ಅವರನ್ನು ಇಲ್ಲಿಯವರೆಗೆ ಯಾವ ಚಿತ್ರಗಳಲ್ಲೂ ನೋಡಿರದ ಗೆಟಪ್ನಲ್ಲಿ ಕಾಣಬಹುದಾಗಿದ್ದು, ಮೊದಲ ಸಲ ಪ್ರಜ್ವಲ್ ಅವರು ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕುರಿತು ವಿವರಿಸಲಾಗಿತ್ತು.
ಆದರೆ, ಅವರಿಗೆ ನಾಯಕಿ ಯಾರೆಂಬುದು ಪಕ್ಕಾ ಆಗಿರಲಿಲ್ಲ. ಈಗ ಪ್ರಜ್ವಲ್ಗೆ ಜೋಡಿ ಸಿಕ್ಕಾಗಿದೆ. ಅದು ಬೇರಾರೂ ಅಲ್ಲ, ಆಶಿಕಾ ರಂಗನಾಥ್. ಹೌದು, ಆಶಿಕಾ ರಂಗನಾಥ್ ಈಗ ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಪವನ್ ಒಡೆಯರ್ ನಿರ್ದೇಶನದ “ರೇಮೋ’ ಚಿತ್ರಕ್ಕೆ ನಾಯಕಿಯಾದ ಅವರು, ಇದೇ ಮೊದಲ ಸಲ ಪ್ರಜ್ವಲ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
ಇಲ್ಲೊಂದು ಲವ್ಟ್ರ್ಯಾಕ್ ಕೂಡ ಇದ್ದು, ಅದು ಚಿತ್ರದ ಪ್ರಮುಖ ಅಂಶ. ಇನ್ನು, ಆಶಿಕಾ ಇಲ್ಲಿ ಡಾಕ್ಟರ್ ಪಾತ್ರ ನಿರ್ವಹಿಸುತ್ತಿದ್ದಾರಂತೆ. ಇದೇ ಮೊದಲ ಬಾರಿಗೆ ಅವರಿಲ್ಲಿ ವೈದ್ಯರಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ನಿರ್ದೇಶಕರ ಹೇಳಿಕೆ.
ಇದೊಂದು ಮಾಫಿಯಾ, ಅಂಡರ್ವರ್ಲ್ಡ್ ಕಥಾಹಂದರ ಹೊಂದಿರುವ ಗ್ಯಾಂಗ್ಸ್ಟರ್ ಒಬ್ಬನ ಕಥೆಯಾಗಿರುವುದರಿಂದ ಹೊಸಬಗೆಯ ನಿರೂಪಣೆಯೊಂದಿಗೆ ಚಿತ್ರ ಮಾಡಲಾಗುತ್ತಿದೆ ಎನ್ನುವ ನಿರ್ದೇಶಕ ಪಿ.ಸಿ.ಶೇಖರ್, ಈ ಹಿಂದೆ ಪ್ರಜ್ವಲ್ಗೆ “ಅರ್ಜುನ’ ಚಿತ್ರ ನಿರ್ದೇಶಿಸಿದ್ದರು. ಆ ಬಳಿಕ ಈಗ ಮತ್ತೂಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ ಶೇಖರ್.
ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಜುಲೈ 4ರಂದು ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಬರ್ತ್ಡೇ ದಿನದಂದು ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಜುಲೈ ಮೊದಲ ಅಥವಾ ಎರಡನೇ ವಾರದಿಂದ ಚಿತ್ರೀಕರಣ ಶುರುವಾಗಲಿದೆ.
ಇಡೀ ಚಿತ್ರ ಥ್ರಿಲ್ಲಿಂಗ್ ಅನುಭವ ಕೊಡಲಿದ್ದು, ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಯಲಿದೆ ಎಂಬುದು ನಿರ್ದೇಶಕರ ಹೇಳಿಕೆ. ಅಂದಹಾಗೆ, ಚಂದನ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಂದನ ಗೌಡ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಈಗ ಫುಲ್ ಬಿಜಿಯಂತೂ ಹೌದು. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಜ್ವಲ್, ಇತ್ತೀಚೆಗಷ್ಟೇ ರಾಮ್ನಾರಾಯಣ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಬೆನ್ನಲ್ಲೆ ಪ್ರಜ್ವಲ್ ಈಗ ಪಿ.ಸಿ.ಶೇಖರ್ ಜೊತೆ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.