Advertisement

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟದಲ್ಲಿ ಸಿದ್ಧತೆ

09:12 PM Jun 18, 2019 | Team Udayavani |

ಮೈಸೂರು: ಮೈಸೂರಿನ ಅದಿದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 2019ನೇ ಸಾಲಿನ ಆಷಾಢ‌ ಶುಕ್ರವಾರಗಳು ಹಾಗೂ ಅಮ್ಮನವರ ಜನ್ಮೋತ್ಸವ ಕಾರ್ಯಕ್ರಮಗಳಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನಾನುಕೂಲವಾಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ವಿವಿಧ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಷಾಢ ಶುಕ್ರವಾರದ ಪೂರ್ವ ಸಿದ್ಧತಾ ಸಭೆ ನಡೆಸಿದ ಅವರು, ಈ ವರ್ಷ ಜುಲೈ 5 ರಂದು ಮೊದಲನೇ ಆಷಾಢ ಶುಕ್ರವಾರ, 12 ರಂದು ಎರಡನೇ ಆಷಾಢ ಶುಕ್ರವಾರ, 19ರಂದು ಮೂರನೇ ಆಷಾಢ ಶುಕ್ರವಾರ,26 ಕೊನೆಯ ಆಷಾಢ‌ ಶುಕ್ರವಾರಗಳಂದು ಹಾಗೂ ಜುಲೈ 24 ರಂದು ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ವರ್ಧಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ವಾಹನ ನಿಲುಗಡೆ: ಚಾಮುಂಡಿಬೆಟ್ಟಕ್ಕೆ ಬರುವ ಎಲ್ಲಾ ಖಾಸಗಿ ವಾಹನಗಳನ್ನು ಹೆಲಿಪ್ಯಾಡ್‌ ಬಳಿ ನಿಲ್ಲಿಸಿ, ಅಲ್ಲಿಂದ ಬೆಟ್ಟಕ್ಕೆ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಬರುವ ವ್ಯವಸ್ಥೆ ಮಾಡುವುದು, ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ಎರಡು ವಾಟರ್‌ ಪೂ›ಫ್ ತಾತ್ಕಾಲಿಕ ಪೆಂಡಾಲ್‌ಗ‌ಳನ್ನು ಅಳವಡಿಸುವುದು. ಭಕ್ತರ ಅನುಕೂಲಕ್ಕಾಗಿ ಹೆಲಿಪ್ಯಾಡ್‌ ಬಳಿಯಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಿಸುವುದು.

ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ಖಾಸಗಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡುವುದು. ಹೆಲಿಪ್ಯಾಡ್‌ ಬಳಿಯಲ್ಲಿ ಭಕ್ತಾದಿಗಳು ಬಸ್ಸುಗಳನ್ನು ಹತ್ತಲು ನಿಲ್ಲುವ ಸರತಿಯ ಸ್ಥಳದಲ್ಲಿ ತಾತ್ಕಾಲಿಕವಾದ ಬ್ಯಾರಿಕೇಡಿಂಗ್‌ಗಳನ್ನು ನಿರ್ಮಿಸುವುದು.

ಸಿಸಿ ಕ್ಯಾಮರಾ: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವುದರಿಂದ ಸರಗಳ್ಳತನ, ಜೇಬು ಕಳ್ಳತನ ಇತ್ಯಾದಿ ಅಹಿತಕರ ಘಟನೆಗಳನ್ನು ತಡೆಯಲು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಹಾಗೂ ವಿದ್ಯುದ್ದೀಪಗಳ ವ್ಯವಸ್ಥೆಗಳನ್ನು ಮುಡಾ ವತಿಯಿಂದ‌ ಮಾಡಬೇಕೆಂದು ತಾಕೀತು ಮಾಡಿದರು.

Advertisement

ವೈದ್ಯಕೀಯ ಚಿಕಿತ್ಸೆ: ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಮುಂಜಾಗ್ರತೆ ಕ್ರಮಕ್ಕಾಗಿ ಭಕ್ತಾದಿಗಳ ವೈದ್ಯಕೀಯ ಚಿಕಿತ್ಸೆಗಾಗಿ ಬೇಕಾದ ಅಗತ್ಯ ಔಷಧಗಳೊಂದಿಗೆ ಸಾಕಷ್ಟು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸುವುದು. ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡುವುದು ಎಂದು ಆರೋಗ್ಯಅಧಿಕಾರಿಗಳಿಗೆ ಸೂಚಿಸಿದರು.

ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಸಾದ್‌, ಮುಡಾ ಅಧೀಕ್ಷಕ ಇಂಜಿನಿಯರ್‌ ಸುರೇಶ್‌ ಬಾಬು, ಮೈಸೂರು ತಹಶೀಲ್ದಾರ್‌ ಮಹೇಶ್‌ಕುಮಾರ್‌, ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್‌ ನರಗುಂದ್‌, ಎಸಿಪಿ ಗಜೇಂದ್ರಪ್ರಸಾದ್‌ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಚಾಮುಂಡೇಶ್ವರಿ ಬೆಟ್ಟದ ದಾಸೋಹ ಭವನದಲ್ಲಿ ನಡೆಯುವ ಪ್ರಸಾದ ವಿತರಣಾ ಕಾರ್ಯಕ್ರಮದ ಜೊತೆಗೆ ಭಕ್ತಾದಿಗಳು ಸಹ ಅಲ್ಲಲ್ಲಿ ಪ್ರಸಾದ ವಿತರಣೆ ಮಾಡುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಹಾರದ ಸುರಕ್ಷತೆಗೆ ಗಮನ ನೀಡಬೇಕು.
-ಬಿ.ಆರ್‌.ಪೂರ್ಣಿಮಾ, ಹೆಚ್ಚುವರಿ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next