Advertisement

ಆಷಾಢ ಶುಕ್ರವಾರ: ಚಾಮುಂಡೇಶ್ವರಿ ಭಕ್ತರಿಗೆ ವಿಶೇಷ ವ್ಯವಸ್ಥೆ

12:14 PM Jun 28, 2017 | |

ಮೈಸೂರು: ಆಷಾಢ ಶುಕ್ರವಾರ ಮತ್ತು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವಕ್ಕೆ ಚಾಮುಂಡಿಬೆಟ್ಟಕ್ಕೆ ಬರುವ ಭಕ್ತಾದಿಗಳು ಹಾಗೂ ಸಾರ್ವಜನಿಕರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಆಷಾಢ ಶುಕ್ರವಾರಗಳಾದ ಜೂ.30, ಜುಲೈ 7, 14, 21 ಹಾಗೂ ಜು.16ರಂದು ಅಮ್ಮನವರ ವರ್ಧಂತಿ ಮಹೋತ್ಸವದಂದು ಬೆಳಗ್ಗೆ 5.30 ರಿಂದ ರಾತ್ರಿ 9.30 ಗಂಟೆ ವರೆಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Advertisement

ಮೂರು ಪ್ರತ್ಯೇಕ ಸರತಿ ಸಾಲುಗಳಲ್ಲಿ ಭಕ್ತರಿಗೆ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ಮಾಡುವ ಸಾಲಿನವರಿಗೆ ಉಚಿತ ದರ್ಶನ, ಮಹಾಬಲೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ಮಾಡುವ ವಿಶೇಷ ಸರತಿ ಸಾಲಿನಲ್ಲಿ ಬರುವವರಿಗೆ 50 ರೂ., 300 ರೂ.ಗಳ ಅಭಿಷೇಕ ಸೇವೆಯವರಿಗೆ ಸಾಲು ದೇವಸ್ಥಾನದ ಉತ್ತರ ದಿಕ್ಕಿನ ಹೈಮಾಸ್ಟ್‌ ಕಂಬ ನಂದಿನಿ ಪಾರ್ಲರ್‌ ಮುಂಭಾಗದಿಂದ ಸರತಿ ಸಾಲು ಪ್ರಾರಂಭವಾಗಲಿದೆ.

ಸಾರಿಗೆ ವ್ಯವಸ್ಥೆ: ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ಆಷಾಢ ಶುಕ್ರವಾರಗಳ ಹಿಂದಿನ ದಿನ ರಾತ್ರಿ 9.30 ಗಂಟೆ ಯಿಂದಲೇ  ನಿರ್ಬಂಧಿಸಲಾಗಿದೆ. ಖಾಸಗಿ ವಾಹನಗಳನ್ನು ಲಲಿತಮಹಲ್‌ ಹೆಲಿಪ್ಯಾಡ್‌ ಬಳಿ ನಿಲಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿಂದ ಉಚಿತವಾಗಿ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ದೇವಸ್ಥಾನಕ್ಕೆ ಹೋಗಿ, ಬರುವ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ 3 ಗಂಟೆಯಿಂದಲೇ ಬಸ್ಸುಗಳ ಸಂಚಾರ ಪ್ರಾರಂಭವಾಗುತ್ತದೆ.

ರಾತ್ರಿ 9 ಗಂಟೆವರೆಗೂ ಸಂಚಾರ ಇರುತ್ತದೆ. ಖಾಸಗಿ ವಾಹನಗಳನ್ನು ದಸರಾ ವಸ್ತು ಪ್ರದರ್ಶನದ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ ನಿಲುಗಡೆ ಮಾಡಿ, ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ 17 ರೂ. ಶುಲ್ಕ ಪಾವತಿಸಿ, ಬೆಟ್ಟಕ್ಕೆ ಹೋಗಿ-ಬರುವ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 5.30 ಗಂಟೆಯಿಂದ ಬಸ್ಸುಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ.  ರಾತ್ರಿ  9ಗಂಟೆ ನಂತರ ಬಸ್ಸುಗಳ ಸಂಚಾರ ಇರುವುದಿಲ್ಲ.

ಪ್ರಸಾದ: ಆಷಾಢ ಶುಕ್ರವಾರ ಮತ್ತು ಅಮ್ಮನವರ ವರ್ಧಂತಿ ದಿನಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗಿಸುವಂತಹ ಸೇವಾರ್ಥದಾರರು ಬೆಟ್ಟಕ್ಕೆ ಪ್ರವೇಶಿಸಲು ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆಯಲ್ಲಿ ಅನುಮತಿ ಪಾಸುಗಳನ್ನು ಪಡೆದು ಬೆಟ್ಟದಲ್ಲಿರುವ ಆಹಾರ ಪರಿವೀಕ್ಷಕರಿಂದ ಪರಿಶೀಲಿಸಿಕೊಂಡು ಹಂಚಬೇಕು. ಇದಕ್ಕಾಗಿ ಚಾಮುಂಡಿಬೆಟ್ಟದ ಬಸ್‌ ಸ್ಟ್ಯಾಂಡ್‌ ಮುಂಭಾಗದಲ್ಲಿ ಹಾಕಿರುವ ಆಹಾರ ಮಳಿಗೆಯಲ್ಲಿಯೇ ಕಡ್ಡಾಯವಾಗಿ ಪ್ರಸಾದ ವಿತರಿಸಬೇಕು.

Advertisement

ಅನುಮತಿ ಇಲ್ಲದೆ ಪ್ರಸಾದ ವಿನಿಯೋಗ ಮಾಡುವವರ ವಿರುದ್ಧ ಕ್ರಮ ವಹಿಸಲಾಗುವುದು. ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್‌ ಬ್ಯಾಗು, ನೀರಿನ ಬಾಟಲ್‌ಗ‌ಳ ಬಳಕೆ ನಿಷೇಧಿಸಿರುವುದರಿಂದ ಸಾರ್ವಜನಿಕ ಭಕ್ತಾದಿಗಳು ಪ್ಲಾಸ್ಟಿಕ್‌ ಬಳಸದಂತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿನಂತಿಸಿದ್ದಾರೆ.

ಬೆಟ್ಟಕ್ಕೆ ಹೋಗಲು ಪಾಸ್‌ ಕಡ್ಡಾಯ
ಮೈಸೂರು:
ಆಷಾಢ ಶುಕ್ರವಾರಗಳಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ವಿವಿಐಪಿ, ವಿಐಪಿ ವಾಹನಗಳು, ಕರ್ತವ್ಯದ ಮೇರೆಗೆ ತೆರಳುವ ವಾಹನಗಳಿಗೆ ಮೈಸೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ವಾಹನ ಪಾಸ್‌ ನೀಡಲಾಗುವುದು. ಈ ವಾಹನಗಳಿಗೆ ಬೆಟ್ಟದ ಮೇಲೆ ಹೋಗಲು ಅವಕಾಶವಿದ್ದು, ಪಾರ್ಕಿಂಗ್‌ಗೆ ನಿಗಧಿಪಡಿಸಿರುವ 2, 3ನೇ ಪಾರ್ಕಿಂಗ್‌ ಜಾಗಗಳಲ್ಲಿ ವಾಹನ ನಿಲುಗಡೆ ಮಾಡುವುದು.

ಮಹಿಷಾಸುರ ಪ್ರತಿಮೆದಿಂದ ದೇವಸ್ಥಾನದ ವರೆಗೆ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಆಷಾಢ ಶುಕ್ರವಾರದ ಹಿಂದಿನ ದಿನ ರಾತ್ರಿ 10 ಗಂಟೆಯಿಂದಲೇ ವಾಹನಗಳಿಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಹಾಗೂ ಹೋಗುವ ವಾಹನಗಳ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಚಾಮುಂಡಿ ಬೆಟ್ಟದಲ್ಲಿರುವ ನಿವಾಸಿಗಳು ವಾಹನ ಸಂಚಾರಕ್ಕೆ ಅನುಮತಿ ಪಡೆಯಲು ಡಿ.ಎಲ್‌, ವಾಹನದ ದಾಖಲಾತಿ, ಮತದಾರರ ಗುರುತಿನ ಚೀಟಿಯ ಜೆರಾಕ್ಸ್‌ ಪ್ರತಿಯನ್ನು ಚಾಮುಂಡಿಬೆಟ್ಟದ ಗ್ರಾಪಂಗೆ ಸಲ್ಲಿಸಿ ಅನುಮತಿ ಪಾಸ್‌ ಪಡೆದುಕೊಳ್ಳುವುದು ಎಂದು ನಗರ ಪೊಲೀಸ್‌ ಆಯುಕ್ತ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next