ವಿಜಯಪುರ: ಮಾಸಿಕ 12 ಸಾವಿರ ರೂ. ಗೌರವ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಕರ್ತವ್ಯದಿಂದ ದೂರ ಉಳಿದು ಪ್ರತಿಭಟಿಸಿದರು.
ನಗರದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಮಾಯಿಸಿದ ಆಶಾ ಕಾರ್ಯಕತರೆìಯರು, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಉತ್ತಮ ಸಾಧನೆ ಮೆಚ್ಚಿದ್ದಾರೆ. ಈ ಸಾಧನೆಗೆ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರ ಎಂದು ಬಣ್ಣಿಸಿದೆ. ಕೋವಿಡ್ ತಡೆಯ ಹೋರಾಟದ ಯಶಸ್ಸಿಗೆ ಆಶಾ ಕಾರ್ಯಕರ್ತೆಯರು ಆಧಾರ ಸ್ತಂಭಗಳು ಎಂಬುದನ್ನು ಒಪ್ಪಿಕೊಂಡಿವೆ. ಆದರೆ ಚಪ್ಪಾಳೆ, ಹೂಮಳೆ, ಹೇಳಿಕೆಗಳಿಂದ ಆಶಾ ಕಾರ್ಯಕರ್ತೆಯರಿಗೆ ಸಂತಸವಾದರೂ ಆಶಾ ಕಾರ್ಯಕರ್ತೆಯರು ವೇತನ ನೀಡಿಕೆಯಲ್ಲಿ ಆದ್ಯತೆ ನೀಡುತ್ತಿಲ್ಲ ಎಂದು ದೂರಿದರು.
ರಕ್ಷಣೆಯಿಲ್ಲದೆ, ಸಾಫ್ಟವೇರ್ ಅವ್ಯವಸ್ಥೆ, ದುಡಿತಕ್ಕೆ ತಕ್ಕ ಪ್ರತಿಫಲವಿಲ್ಲದ ಅನಿಶ್ಚಿತ ವೇತನ, ಕೋವಿಡ್ ರೋಗದಂಥ ಅಪಾಯಕಾರಿ ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಕರ್ತವ್ಯ ಪ್ರಜ್ಞೆ ತೋರುತ್ತಿರುವ ಆಶಾ ಕಾರ್ಯಕರ್ತೆಯರ ಬದುಕಿಗೆ ಸರ್ಕಾರ ಆಧ್ಯತೆ ನೀಡಬೇಕು. ಅವರ ಆರೋಗ್ಯ ಸುರಕ್ಷತಾ ಕ್ರಮಗಳಿಗಾಗಿ ಅಗತ್ಯ ಪರಿಕರ, ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್‌ಗಳಂಥ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾಶೀಬಾಯಿ ಜೆ.ಟಿ, ಜಯಶ್ರೀ ಕಂಬಾರ, ಅಂಬಿಕಾ ಒಳಸಂಗ, ಆಫ್ರಿನಾ ಮಕಾಂದಾರ, ಅಣ್ಣಕ್ಕಾ, ಲಲಿತಾ ಮುಂಜೆನ್ನವರ, ಲಲಿತಾ ತಳವಾರ, ಮಲ್ಲಮ್ಮ ಕಠಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.