ಬಾಗಲಕೋಟೆ: ಕೋವಿಡ್ ಸಂಕಷ್ಟದಲ್ಲೂ ತಮ್ಮ ಜೀವವನ್ನು ಪಣಕ್ಕಿಟ್ಟು ಕೋವಿಡ್ ವೈರಸ್ ವಿರುದ್ದ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ 12ಸಾವಿರ ರೂ. ವೇತನ ನಿಗದಿ ಮಾಡುವಂತೆ ಒತ್ತಾಯಿಸಿ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಕೆಲಸ ಸ್ಥಗಿತಗೊಳಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಅನಂತ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು. ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಅಂಜನಾ ಕುಂಬಾರ ಮಾತನಾಡಿ, ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿರುವ ಆಶಾ ಕಾರ್ಯಕರ್ತೆಯರು ವೇತನ ವಿಲ್ಲದೆ, ರಕ್ಷಣೆಯಿಲ್ಲದೆ, ಸಾಫ್ಟವೇರ್ ಅವ್ಯವಸ್ಥೆಯಿಂದಾಗಿ ಬಳಲಿ ಬೆಂಡಾಗಿದ್ದಾರೆ. ದುಡಿತಕ್ಕೆ ತಕ್ಕ ಪ್ರತಿಫಲವಿಲ್ಲದೇ ಆಶಾಗಳು ಅನಿಶ್ಚಿತ ವೇತನದಿಂದ ಹೈರಾಣಾಗಿದ್ದು, ಸರ್ಕಾರ ಕೂಡಲೆ ಗೌರವಧನ ಹಾಗೂ ಪ್ರೋತ್ಸಾಹಧನ ಎರಡನ್ನೂ ಸೇರಿಸಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆಗೆ ನೈಜ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾಸಿಕ ಕನಿಷ್ಟ 12,000 ರೂ. ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಭಾರತಿ ದೇವಕತೆ ಮಾತನಾಡಿ, ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನು ಪಣವಾಗಿಟ್ಟು, ಕೊರೊನಾ ಸೋಂಕು ವಿರುದ್ಧ ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ. ಸೋಂಕಿತರ ನಡುವೆ ದಿನನಿತ್ಯವೂ ಹಗಲು ರಾತ್ರಿ ಎನ್ನದೆ ಕೆಲಸ ನಿರ್ವಹಿಸುತ್ತಿರುವ ಆಶಾಗಳಿಗೆ ಆರೋಗ್ಯ ರಕ್ಷಣೆಯ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದರು.
ಆಶಾ ಕಾರ್ಯಕರ್ತೆಯರು ತಮ್ಮ ಅಳಲನ್ನು ಸರಕಾರಕ್ಕೆ ತಿಳಿಸಲು ಈ ಹೋರಾಟ ಅನಿವಾರ್ಯವಾಗಿದೆ. ಬರುವ ಗೌರವಧನ ಬಿಡಿ ಬಿಡಿಯಾಗಿ ನೀಡುತ್ತಿರುವುದರಿಂದ ನಮಗೆ ದುಡಿತಕ್ಕೆ ಗೌರವಧನ ಕೈ ಸೇರುತ್ತಿಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ವೇತನವನ್ನು 12ಸಾವಿರಕ್ಕೆ ನಿಗ ದಿ ಮಾಡಬೇಕು. ಇಲ್ಲದಿದ್ದರೆ, ಎಲ್ಲ ಆಶಾಗಳು ಸೇವೆಯನ್ನು ಸ್ಥಗಿತಗೊಳಿಸುತ್ತವೆ ಎಂದು ಮನವಿ ನೀಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸೈನಾಜ ಜಂಗಿ, ರುಕ್ಷಾನಾ ನಾಗಠಾಣ, ಶಿಲಾ ಮೆಳ್ಳಿಗೆರಿ, ನಿಲಮ್ಮ ವಿಭೂತಿ, ರೀನಾ, ಮಹಾದೇವಿ ಸುವರ್ಣಾ ಪುಷ್ಪಾ ಮುಂತಾದವರು ಪಾಲ್ಗೊಂಡಿದ್ದರು.