“ರಾಬರ್ಟ್’ ಚಿತ್ರದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೆ ಪರಿಚಯವಾದ ನಟಿ ಆಶಾ ಭಟ್, ಸದ್ಯ ಇನ್ನೂ ಹೆಸರಿಡದ ತಮ್ಮ ಹೊಸಚಿತ್ರ ತಯಾರಿಯಲ್ಲಿದ್ದಾರೆ.
ಇದರ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿರುವ ಆಶಾ ಭಟ್, ಇತ್ತೀಚೆಗೆ ಪದ್ಮ ಪ್ರಶಸ್ತಿ ವಿಜೇತರಾದ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರನ್ನು ಭೇಟಿಯಾಗಿರುವ ತಮ್ಮ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇವರಿಂದ ಬಹಳ ಪ್ರಭಾವಿತರಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಶಾನ್ವಿ ನಟನೆಯ ‘ಕಸ್ತೂರಿ ಮಹಲ್’ ಬಿಡುಗಡೆಗೆ ತಯಾರಿ ಜೋರು
ತಮ್ಮ ಇನ್ಸಾಗ್ರಾಂ ಖಾತೆಯಲ್ಲಿ ಸಾಲುಮರದ ಪದ್ಮಶ್ರೀ ತಿಮ್ಮಕ್ಕ ಹಾಗೂ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರೊಂದಿಗೆ ಕಳೆದ ಅನುಭವಗಳನ್ನು ಹಂಚಿಕೊಂಡಿರುವ ಆಶಾ ಭಟ್, “ಇಬ್ಬರು ಪರಿಸರವಾದಿ ಮಹಿಳೆಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದು ನನ್ನ ಪಾಲಿಗೆ ಮಾಂತ್ರಿಕ ಕ್ಷಣಗಳಂತಿದ್ದವು. ಮರಗಳನ್ನು ಮಕ್ಕಳಂತೆ ಸಲಹಿ ಪೋಷಿಸಿದ ತಿಮ್ಮಕ್ಕ ನಮ್ಮ ನಡುವಿನ ಹಸಿರು ಕ್ರಾಂತಿಯ ಸೂಪರ್ ಹೀರೋ ಇದ್ದಂತೆ. ಇನ್ನು ತುಳಸಿ ಗೌಡ ನಮ್ಮ ನಡುವೇ ಇರುವಂಥ “ಅರಣ್ಯ ವಿಶ್ವಕೋಶ’ ಮರಗಿಡಗಳನ್ನು ಗುರುತಿಸುವ ಅವರ ಜ್ಞಾನ ಅದ್ಭುತ. ನಮ್ಮ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಇವರಿಬ್ಬರಿಂದ ಬಹಳ ಪ್ರಭಾವಿತಳಾಗಿದ್ದೇನೆ. ಇವರಿಂದ ಸ್ಫೂರ್ತಿ, ಆಶೀರ್ವಾದ ಸಿಕ್ಕಿರುವುದು ಸಾರ್ಥಕ ಭಾವ ಮೂಡಿಸಿದೆ. ಪರಿಸರ ದಂತಕತೆಗಳ ನಡುವೆ ನಾವಿರುವುದು ನಮ್ಮ ಪುಣ್ಯ’ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
Related Articles
ಸದ್ಯ ಆಶಾ ಭಟ್ ಅವರ ಪೋಸ್ಟ್‌ಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. “ನಿಜವಾದ ಸಾಧಕರನ್ನು ಸ್ಮರಿಸುವ ಮೂಲಕ ಇಂದಿನ ಯುವಜನತೆಗೆ ಅವರ ಸಾಧನೆಯನ್ನು ಪರಿಚಯಿಸುವ ಕೆಲಸ ಮಾಡಿದ್ದೀರಿ’ ಎಂದು ಆಶಾ ಕಾರ್ಯಕ್ಕೆ ಭೇಷ್ ಎಂದಿದ್ದಾರೆ.