ತುಳು ಸಿನೆಮಾ ಇಂಡಸ್ಟ್ರಿ ಬೆಳೆಯುತ್ತಿದ್ದಂತೆ ಇಲ್ಲಿನ ಬೆಳವಣಿಗೆ ಸ್ಯಾಂಡಲ್‌ವುಡ್‌ನಾಚೆಗೂ ಸುದ್ದಿ ಮಾಡುತ್ತಿದೆ. ಹೀಗಾಗಿ ಕರಾವಳಿಯ ತಟದಲ್ಲಿನ ಪ್ರತಿಭೆಗಳಿಗೆ ಹಾಗೂ ಇಲ್ಲಿನ ಕಥೆಗೆ ಹೆಚ್ಚು ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಸ್ಯಾಂಡಲ್ ವುಡ್‌ನ ಕಥೆಗಳು ಹುಟ್ಟಿಕೊಳ್ಳುತ್ತಿದೆ. ಜತೆಗೆ, ತುಳು ಮೂಲದಲ್ಲಿರುವವರು ಕನ್ನಡದಾಚೆಗೆ ಮನಸ್ಸು ಮಾಡಲು ಆರಂಭಿಸಿದ್ದಾರೆ. ಇಲ್ಲಿಂದಲೇ ಸಿದ್ಧಗೊಳಿಸಿದ ಕೆಲವು ಕನ್ನಡ ಸಿನೆಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಪಡೆದಿರುವ ಇತಿಹಾಸ ಇರುವುದರಿಂದ ಈ ಭಾಗದಲ್ಲಿ ಸಾಕಷ್ಟು ವರ್ಕೌಟ್ ಆದಂತೆ ಕಂಡುಬರುತ್ತಿದೆ.
ಮೂಡಬಿದಿರೆಯ ಅಶ್ವಿನ್ ಜೆ. ಪಿರೇರಾ ನಿರ್ಮಾಣದ, ರಾಜೇಶ್ ವೇಣೂರು ನಿರ್ದೇಶನದ ಕನ್ನಡ ಸಿನೆಮಾವೊಂದು ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಸೌಂಡ್ ಮಾಡುತ್ತಿದೆ. ‘ಅಸತೋಮಾ ಸದ್ಗಮಯ’ ಎಂಬ ಟೈಟಲ್ ಕೂಡ ಈ ಸಿನೆಮಾಕ್ಕೆ ವಿಭಿನ್ನವಾಗಿದ್ದು, ಒಂದೆರಡು ದಿನದ ಹಿಂದೆ ಬಿಡುಗಡೆಯಾದ ಸಿನೆಮಾದ ಟೀಸರ್ ಕೂಡ ಕ್ರೇಜ್ ಹುಟ್ಟಿಸಿದೆ. ವಿಶೇಷವೆಂದರೆ ಮಂಗಳೂರು ಹಾಗೂ ಸುತ್ತಮುತ್ತಲಿನ ತಂಡ ಮಾಡಿದ ಸಿನೆಮಾವಿದು. ಸಿನೆಮಾದ ಕೆಲವು ಭಾಗವನ್ನು ಈ ಭಾಗದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಮೆಲಿಸ್ಸಾ ಡಿ’ಸೋಜಾ ಸಹನಿರ್ಮಾಪಕರಾಗಿದ್ದಾರೆ. ಜು. 6ರಂದು ಈ ಸಿನೆಮಾ ರಾಜ್ಯಾದ್ಯಂತ ತೆರೆಕಾಣಲಿದೆ.
ಸಸ್ಪೆನ್ಸ್, ಥ್ರಿಲ್ಲಿಂಗ್, ಹ್ಯೂಮರ್ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬಿತ್ತರಿಸುವ ಮೂಲಕ ಸಿನೆಮಾ ವಿಭಿನ್ನವಾಗಿ ಮೂಡಿಬಂದಿದೆ. ಕಿಶೋರ್ ಕುಮಾರ್ ಛಾಯಾಗ್ರಹಣ ಮಾಡಿರುವ ಈ ಸಿನೆಮಾಕ್ಕೆ ಕದ್ರಿ ಮಣಿಕಾಂತ್ ಹಿನ್ನೆಲೆ ಸಂಗೀತ ನೀಡಿದ್ದು, ಸಾಹಿತ್ಯ ಸಂಗೀತವನ್ನು ವಹಾಬ್ ಸಲೀಂ ಒದಗಿಸಿದ್ದಾರೆ. ಕುಡ್ಲದ ಪ್ರಮುಖರು ಮಾಡುತ್ತಿರುವ ಇನ್ನೊಂದು ಸಿನೆಮಾ ಕೂಡ ಈಗ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ‘ಜೀವನ ಯಜ್ಞ’ ಎಂಬ ಟೈಟಲ್ ಫಿಕ್ಸ್ ಮಾಡಿದ ಈ ಸಿನೆಮಾವನ್ನು ಶಿವು ಸರಳಬೆಟ್ಟು ನಿರ್ದೇಶಿಸುತ್ತಿದ್ದಾರೆ. ಮನೋಜ್ ಪುತ್ತೂರು, ಶೈನ್ ಶೆಟ್ಟಿ, ಅನೂಪ್‌ಸಾಗರ್, ಮಠ ಕೊಪ್ಪಳ್ ಮುಖ್ಯ ತಾರಾಗಣದಲ್ಲಿ ರೆಡಿಯಾಗುತ್ತಿರುವ ಈ ಸಿನೆಮಾದಲ್ಲಿ ಸೌಜನ್ಯಾ ಹೆಗ್ಡೆ, ಅನ್ವಿತಾ ಸಾಗರ್, ಆದ್ಯಾ ಆರಾಧನ್, ಮೆರ್ವಿನ್ ಶಿರ್ವ ಜತೆಯಾಗಿದ್ದಾರೆ. ಇದರಲ್ಲಿ ಬಹುತೇಕರು ಕರಾವಳಿ ಭಾಗದವರು ಎಂಬುದು ಉಲ್ಲೇಖನೀಯ.
ಮಂಗಳೂರಿನ ಬಹುತೇಕ ಭಾಗದಲ್ಲಿ ಈ ಸಿನೆಮಾದ ಶೂಟಿಂಗ್ ಕೂಡ ನಡೆಸಲಾಗಿದೆ. ಅಂದಹಾಗೆ, ಕರಾವಳಿ ಹುಡುಗ ರಕ್ಷಿತ್ ಶೆಟ್ಟಿಯ ಪಟಾ ಪೋಸ್ಟರ್ ನಿಕ್‌ಲಾ ಹೀರೋ ‘ಉಳಿದವರು ಕಂಡಂತೆ’ ಸಿನೆಮಾ ಕನ್ನಡ ಚಿತ್ರರಂಗದಲ್ಲಿ ಮೊದಲಾಗಿ ಹೊಸ ಮನ್ವಂತರವನ್ನೇ ಬರೆಯುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ಕೆಲವು ಕರಾವಳಿ ಸಿನೆಮಾಗಳು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟಿಗಿನ ಸೌಂಡ್ ಮಾಡಿದ್ದವು. ಅನಂತರ ಕರಾವಳಿ ಭಾಗದಲ್ಲಿ ಶೂಟಿಂಗ್ ಆಗಿ ಇಲ್ಲಿನದ್ದೇ ಕಥಾನಕ ಹಾಗೂ ಇಲ್ಲಿನವರು ತಯಾರಿಸಿದ ‘ರಂಗಿತರಂಗ’ ಸ್ಯಾಂಡಲ್ ವುಡ್ ಸಹಿತ ಎಲ್ಲೆಡೆಯಲ್ಲೂ ಸದ್ದು ಮಾಡಿತ್ತು. ಬಳಿಕ ರಿಶಬ್ ಹಾಗೂ ರಕ್ಷಿತ್ ಶೆಟ್ಟಿ ಮೂಲಕ ಬಂದ ‘ಕಿರಿಕ್ ಪಾರ್ಟಿ’ ಊಹೆಗೂ ಸಿಲುಕದ ಹಾಗೆ ಹಿಟ್ ಆಯಿತು.
ಅದೇ ರೀತಿ ಇತ್ತೀಚೆಗೆ ಬಂದ ರಾಜ್ ಶೆಟ್ಟಿಯವರ ‘ಒಂದು ಮೊಟ್ಟೆಯ ಕಥೆ’ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಫೇಮಸ್ ಆಯಿತು. ನಿಶ್ಯಬ್ದ- 2 ಇತ್ತೀಚೆಗೆ ರಿಲೀಸ್ ಆಗಿ ಸಾಕಷ್ಟು ಸುದ್ದಿಯಲ್ಲಿತ್ತು. ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನೆಮಾ ಈಗಾಗಲೇ ಎಲ್ಲೆಡೆ ಹೊಸ ಹವಾ ಸೃಷ್ಟಿಸಿದೆ. ಜತೆಗೆ ಕೊನೆಯ ಹಂತದ ಶೂಟಿಂಗ್ ಮುಗಿಸಿದ ‘ಲುಂಗಿ’ ಹಾಗೂ ‘ಇದು ಎಂಥಾ ಲೋಕವಯ್ನಾ’ ಸಿನೆಮಾ ಕೂಡ ಹೊಸ ನಿರೀಕ್ಷೆ ಮೂಡಿಸಿದೆ. ಇದರ ಜತೆಗೆ ‘ವಿರುಪಾ’ ಸಿದ್ಧಗೊಳ್ಳುತ್ತಿದೆ.