Advertisement

ಮುಸ್ಲಿಂ ನಾಯಕರ ಬೆಳವಣಿಗೆ ಬಯಸದ ಕಾಂಗ್ರೆಸ್‌ : ಅಸಾದುದ್ದೀನ್‌ ಓವೈಸಿ 

01:30 PM Aug 31, 2021 | Team Udayavani |

ಬೆಳಗಾವಿ: ಮುಸ್ಲಿಂ ನಾಯಕರು ಬೆಳೆಯಬಾರದು ಅಂತ ಕಾಂಗ್ರೆಸ್‌ ಬಯಸುತ್ತಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ ಮುಸ್ಲಿಂರಿಗೆ ಅಧಿಕಾರದ ಹಕ್ಕು ಸಿಗಬೇಕು. ಅದಕ್ಕಾಗಿ ಚುನಾವಣೆ ಎದುರಿಸಿ ಗೆಲ್ಲಬೇಕು ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್‌ ಓವೈಸಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಂಸತ್‌ನಲ್ಲಿ ಬಹಳಷ್ಟು ಕಾನೂನುಗಳಿಗೆ ಕಾಂಗ್ರೆಸ್‌ ಬೆಂಬಲಿಸುತ್ತದೆ. ಬಿಜೆಪಿಗೆ ಪ್ರತಿಯೊಂದು ಕಾನೂನು ರಚಿಸಲು ಕಾಂಗ್ರೆಸ್‌ ಪರೋಕ್ಷವಾಗಿ ಸಾಥ್‌ ಕೊಡುತ್ತಿದೆ. ಸಂಸತ್‌ನಲ್ಲಿ ಅನೇಕ ಸಲ ವಿರೋಧಿಸಿದ್ದೇನೆ. ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಹಕ್ಕಿದೆ. ಬೆಲೆ ಏರಿಕೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂರು ರಾಜಕೀಯ ಹಕ್ಕು ಪಡೆದಾಗ ದೇಶ ಶಕ್ತಿಶಾಲಿಯಾಗಲಿದೆ. ದೇಶದಲ್ಲಿ ಮುಸ್ಲಿಂ ನಾಯಕರು ಯಾರಿದ್ದಾರೆ ಹೇಳಲಿ, ನಾನಂತೂ ಗಲ್ಲಿ ಲೀಡರ್‌. ನಾನು ಬೇಡ, ನನ್ನ ಬಿಟ್ಟು ಬೇರೆ ಯಾರು ಇದ್ದಾರೆ ಹೇಳಲಿ. ಮುಸ್ಲಿಂರನ್ನು ಹೊರತು ಪಡಿಸಿ ಎಲ್ಲ ಜಾತಿಯ ನಾಯಕರು ಇದ್ದಾರೆ. ಸಿದ್ದರಾಮಯ್ಯ ಕುರುಬ, ಯಡಿಯೂರಪ್ಪ ಲಿಂಗಾಯತ, ಡಿ.ಕೆ. ಶಿಕುಮಾರ ಒಕ್ಕಲಿಗ ಸಮುದಾಯದ ನಾಯಕರು ಇದ್ದಾರೆ. ಯಾಕೆ ಮುಸ್ಲಿಂ ಸಮುದಾಯದವರು ಇಲ್ಲ ಎಂದರು.

ಅಜಮ್‌ ಖಾನ್‌ ಆದಷ್ಟು ಬೇಗ ಬಿಡುಗಡೆ ಆಗಲಿ. ಅವರ ಎಲ್ಲಾ ಸಂಕಷ್ಟಗಳು ಬೇಗ ಪರಿಹಾರವಾಗಲಿ. ದೇಶದಲ್ಲಿ ಮುಸ್ಲಿಂರ ಪರಿಸ್ಥಿತಿ ಬ್ಯಾಂಡ್‌ ಬಾಜಾ ಅವರಂತೆ ಆಗಿದೆ. ಮದುಮಗ ಒಳಗೆ ಹೋಗುವವರೆಗೆ ಬ್ಯಾಂಡ್‌ ಬಾಜಾದವರು ಬರುತ್ತಾರೆ. ಮದುಮಗ ಒಳಗೆ ಹೋದರೆ ಬ್ಯಾಂಡ್‌ ಬಾಜಾದವರು ಹೊರಗೆ ಸೆ„ಡ್‌ನ‌ಲ್ಲಿ ಉಳಿದು ಬಿಡುತ್ತಾರೆ ಎಂದರು.

ನನ್ನ ಮೇಲೆ, ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಮತ ಹಾಕಬೇಕು. ಬೆಳಗಾವಿ ಪಾಲಿಕೆ ಗೆಲ್ಲುವುದೇ ನಮ್ಮ ರಣತಂತ್ರ ಜನರ ವಿಶ್ವಾಸ, ಪ್ರೀತಿ ಗಳಿಸುವುದಾಗಿದೆ. ತಳಮಟ್ಟದಲ್ಲಿ ಪಕ್ಷ ಗಟ್ಟಿ ಮಾಡುವುದೇ ನಮ್ಮ ಅಜೆಂಡಾ ಇದೆ ಎಂದರು.

Advertisement

ಜೆಡಿಎಸ್‌ ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೇವು. ಹೀಗಾಗಿ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡು ತಪ್ಪು ಮಾಡಿದ್ದು, ಆನಂತರ ನಮಗೆ ಮನವರಿಕೆ ಆಯಿತು. ಆಗ ಕುಮಾರಸ್ವಾಮಿ ನನಗೆ ಕರೆ ಮಾಡಿ ಪ್ರಮಾಣ ವಚನಕ್ಕೆ ಬರಲು ಆಹ್ವಾನಿಸಿದ್ದರು. ನೀವು ಬಹಳ ದೊಡ್ಡ ತಪ್ಪು ಮಾಡಿದ್ದೀರಿ ಅಂತ ಆಗಲೇ ತಿರುಗೇಟು ನೀಡಿದ್ದೇನೆ. ಹೀಗಾಗಿಯೇ ನಾವು ಪಾಲಿಕೆಯಲ್ಲಿ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದರು.

ಒವೈಸಿ ಬಿಜೆಪಿಯ ಬಿ ಟೀಮ್‌ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಓವೈಸಿ, ರಾಹುಲ್‌ ಗಾಂಧಿಯನ್ನು ಅಮೇಥಿ ಕ್ಷೇತ್ರದಲ್ಲಿ ನಾನೇ ಸೋಲಿಸಿದೆ. ಆ ಬಳಿಕ ರಾಹುಲ್‌ ಗಾಂಧಿ ವೈನಾಡಿನಲ್ಲಿ ಗೆದ್ದರು. ಕಾಂಗ್ರೆಸ್‌ನ ಶಾಸಕರು ಹೋಗಿ ಬಿಜೆಪಿ ತೊಡೆ ಮೇಲೆ ಕುಳಿತರೆ ಇದಕ್ಕೂ ನಾನೇ ಕಾರಣನಾ ಎಂದು ಪ್ರಶ್ನಿಸಿದರು. ಅಫ್ಘಾನಿಸ್ತಾನ ತಾಲಿಬಾನ್‌ ವಶವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಓವೈಸಿ, ನನಗೂ ಅಫ್ಘಾನಿಸ್ತಾನಕ್ಕೆ ಸಂಬಂಧವೇ ಇಲ್ಲ. ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎನ್ನುವುದನ್ನು ಮೋದಿಯವರನ್ನು ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next