Advertisement

ನೀವು ಆಗಿ ಅಣ್ಣಾ ಬಾಂಡ್‌: ಸವರಿನ್‌ ಗೋಲ್ಡ್‌ ಬಾಂಡ್ಸ್‌ 

02:03 PM Mar 06, 2017 | |

ಹೂಡಿಕೆ ಮಾಡುವುದಾದರೆ ಗಟ್ಟಿ ಬಂಗಾರವನ್ನೇ ಕೊಳ್ಳಬೇಕಿಲ್ಲ. ಬದಲಾಗಿ ಪೇಪರ್‌ ಬಂಗಾರವೂ ಸಿಗುತ್ತದೆ. ಇದನ್ನು ಕೂಡ ನೀವು ಯಾವಾಗ ಬೇಕಾದರೂ ಮಾರಬಹುದು. ಕೊಂಡಿದ್ದಕ್ಕೆ ಬಡ್ಡಿಯೂ ಸಿಗುತ್ತದೆ. 

Advertisement

ನಮ್ಮಲ್ಲಿ ಬಂಗಾರವೆಂದರೆ ಪಂಚಪ್ರಾಣ. ಅದರಲ್ಲೂ ಹೆಣ್ಣುಮಕ್ಕಳಿಗೆ ಎಷ್ಟು ಬಂಗಾರ ಕೊಂಡರೂ ಸಾಲದು. ಆದರೆ ಗಂಡಸರ ಲೆಕ್ಕಾಚಾರವೇ ಬೇರೆ. ಮನೆಯಲ್ಲಿ ಹೆಣ್ಣು ಮಗುವಿದೆ, ಅವಳಿಗೆ ಮುಂದೆ ಮದುವೆ ಮಾಡುವಾಗ ಬಂಗಾರದ ಒಡವೆಗಳನ್ನು ಮಾಡಿಸಬೇಕು. ಅದಕ್ಕಾಗೆ ಈಗಿನಿಂದಲೇ ವರಮಾನದಲ್ಲಿ ಸ್ವಲ್ಪ ಭಾಗದಲ್ಲಿ ಬಂಗಾರದ ಗಟ್ಟಿಗಳನ್ನು ಕೊಂಡು ಇಟ್ಟರೆ ಮುಂದೆ ನೆರವಾದೀತು ಎನ್ನುವುದು. ಇನ್ನು ಕೆಲವರಿಗೆ ಬಂಗಾರ ಆಸ್ತಿಇದ್ದಂತೆ. ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆಯಲ್ಲಿಯೇ ಇದೆ. ಬ್ಯಾಂಕಿನಲ್ಲಿ ಠೇವಣಿ ಇಟ್ಟಲ್ಲಿ ಅದರ ಬಡ್ಡಿಗೆ ತೆರಿಗೆ ಕೊಡಬೇಕು. ಬಂಗಾರದಲ್ಲಿ ಇನ್ವೆಸ್ಟ್‌ ಮಾಡಿದರೆ ಅನಾಯಾಸವಾಗಿ ಅದು ತೆರಿಗೆ ಇಲ್ಲದೆಯೇ ದುಡಿಯುತ್ತದೆ. ಮೇಲಾಗಿ ತೀರಾ ಹಣದ ಅವಶ್ಯಕತೆ ಇದ್ದಲ್ಲಿ ಅದನ್ನೇ ಬ್ಯಾಂಕುಗಳಲ್ಲಿ ಅಡಮಾನವಿಟ್ಟು ಸಾಲ ತೆಗೆಯಬಹುದು.

 ಇದು ಬಂಗಾರ ಕೊಳ್ಳುವವರ ಯೋಚನೆಯಾದರೆ ಸರ್ಕಾರದ ಯೋಚನೆಯೇ ಇನ್ನೊಂದು ರೀತಿಯದ್ದು. ಭಾರತೀಯರ ಬಂಗಾರದ ಮಮತೆಗೆ ಬೇಕಾಗುವಷ್ಟು ನಮ್ಮ ಗಣಿಗಳಲ್ಲಿ ಬಂಗಾರ ಸಿಗುವುದಿಲ್ಲ. ಏನಿದ್ದರೂ ಆಮದು ಮಾಡಿಕೊಳ್ಳಬೇಕು. ಮಂದಿಯ ದುಡ್ಡನ್ನು ಹೊರದೇಶಕ್ಕೆ ಕೊಡುವುದಾದರೆ ಅದು ಭಾರತದ ಆರ್ಥಿಕತೆಗೆ ನಷ್ಟವೇ ಸರಿ. ಅದಕ್ಕೆಂದೆ ಕೇಂದ್ರಸರ್ಕಾರ ಸವರಿನ್‌ ಗೋಲ್ಡ್‌ಬಾಂಡ್ಸ್‌ ಸ್ಕೀಮ್‌ ಜಾರಿಗೆ ತಂದಿದೆ. ಇದರಲ್ಲಿ ತೊಡಗಿಸಿದ ಹಣ ಭಾರತದ ಅಭಿವೃದ್ಧಿಕಾರ್ಯಗಳಿಗೆ  ಸಿಗುತ್ತವೆ.

ಏನಿದು ಸ್ಕೀಂ
ಇಲ್ಲಿ ಬಂಗಾರದ ಖರೀದಿಯೇ ಇಲ್ಲ. ನಿಮ್ಮ ಕೈಗೆ ಬಂಗಾರವನ್ನೂ ಕೊಡುವುದಿಲ್ಲ. ಏನಿದ್ದರೂ ಕಾಗದದಲ್ಲಷ್ಟೇ ಬಂಗಾರದ ಲೆಕ್ಕವಿರುತ್ತದೆ. ಬಂಗಾರ ಕೊಂಡು, ತಂದು ಮನೆಯಲ್ಲಿಟ್ಟರೆ ಕಳ್ಳಕಾಕರ ಭಯ. ಇಲ್ಲಿ ಅದೂ ಇಲ್ಲ. ಗೊಂದಲ ಬೇಡ. ಇದು ಸರ್ಕಾರದ ಯೋಜನೆಯಾದ್ದರಿಂದ ಹೆದರಿಕೆ ಬೇಡ. ನಿಮ್ಮಹಣಕ್ಕೆ ಖಾತ್ರಿ ಇದೆ. ನೀವು ಇಲ್ಲಿ ಒಂದು ಗ್ರಾಂ ನಿಂದ ಐನೂರು ಗ್ರಾಂ ಬಂಗಾರದವರೆಗೆ ಖರೀದಿಸಬಹುದು. ನೀವು ಈ ಯೋಜನೆಯಲ್ಲಿ ಹಣ ತೊಡಗಿಸುವ ಹಿಂದಿನ ವಾರದಲ್ಲಿ ಇಂಡಿಯ ಬುಲಿಯನ್‌ ಅಂಡ್‌ ಜುವೆಲರ್ ಅಸೋಸಿಯೇಷನ್‌ 999 ಪ್ಯೂರಿಟಿ ಬಂಗಾರಕ್ಕೆ ಪ್ರಕಟಿಸುವ ದರಕ್ಕಿಂತ ಗ್ರಾಂಗೆ ರೂ.50 ಕಡಿಮೆಯಲ್ಲಿ ನಿಮ್ಮ ಹೆಸರಿಗೆ ಈ ಬಾಂಡಿನಲ್ಲಿ ಹಣ ತೊಡಗಿಸಲಾಗುತ್ತದೆ. ಅದಕ್ಕೆ ಕೇಂದ್ರ ಸರ್ಕಾರ ನಿಮ್ಮ ಹಣಕ್ಕೆ ಶೇ.2.50 ಬಡ್ಡಿಯನ್ನು ನೀಡುತ್ತದೆ. ಬಾಂಡಿನ ಅವಧಿ ಮುಗಿದನಂತರ ನೀವು ವಾಪಸ್ಸು ಪಡೆಯುವ ಹಿಂದಿನ ವಾರದ ಬಂಗಾರದ ದರಕ್ಕೆ ಸಮನಾಗಿ ನಿಮಗೆ ಹಣ ಸಿಗಲಿದೆ. ಆಗ ಅವಶ್ಯಕತೆ ಇದ್ದರೆ ನಿಜ ಬಂಗಾರ ಕೊಂಡುಕೊಳ್ಳಿ.

ಸರ್ಕಾರ ಕಾಲಕಾಲಕ್ಕೆ ಈ ಯೋಜನೆಯನ್ನು ಘೋಷಿಸುತ್ತಾ ಇರುತ್ತದೆ. ಪ್ರಸ್ತುತ ಫೆಬ್ರವರಿ 27 ರಿಂದ ಮಾರ್ಚ್‌ 3ರ ವರೆಗೆ ಇನ್ವಸ್ಟ್‌ ಮಾಡುವಂತೆ ಈ ಯೋಜನೆಯ ಸಿರೀಸ್‌ ನಾಲ್ಕನ್ನು ಗೆಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಈ ಸರಣಿ ಜಾರಿಗೆ ಬರುವುದು 2017 ಮಾರ್ಚ್‌ 17ರಿಂದ. ಮುಂದೆಯೂ ಈ ಸರಣಿ ಪ್ರಕಟವಾಗುತ್ತಲೇ ಇರುತ್ತದೆ.

Advertisement

ಯಾರು ಇದರಲ್ಲಿ ಹಣ ತೊಡಗಿಸಬಹುದು?
ಯಾವುದೇ ಭಾರತೀಯ ಪ್ರಜೆ ವೈಯಕ್ತಿಕವಾಗಿಯಾಗಲಿ, ಜಂಟಿಯಾಗಿಯಾಗಲಿ ಅಥವಾ ಅಪ್ರಾಪ್ತರ ಪೋಷಕರಾಗಲಿ ಇದರಲ್ಲಿ ಹಣ ತೊಡಗಿಸಬಹುದು. ಟ್ರಸ್ಟ್‌, ಚಾರಿಟೆಬಲ್‌ ಸಂಸ್ಥೆಗಳು, ಯುನಿರ್ವಸಿಟಿ ಇಂತವರು ಇದನ್ನು ಖರೀದಿಸಬಹುದು.

ಎಷ್ಟು ಹಣ ತೊಡಗಿಸಬಹುದು?
ಒಬ್ಬರು ಒಂದು ವರ್ಷದ ಅವಧಿಯಲ್ಲಿ( ಏಪ್ರಿಲ್‌-ಮಾರ್ಚ್‌) ಕನಿಷ್ಟ ಒಂದು ಗ್ರಾಂನಿಂದ ಗರಿಷ್ಠ ಐನೂರು ಗ್ರಾಂಗೆ ಸಮನಾದ ಮೊತ್ತವನ್ನು ತೊಡಗಿಸಬಹುದು. ಪದೇಪದೇ ಈ ಸರಣಿ ಪ್ರಕಟವಾಗುತ್ತಿರುವುದರಿಂದ ಒಟ್ಟು ತೊಡಗಿಸುವ ಹಣದ ಪ್ರಮಾಣ ಇದನ್ನು ಮೀರುವಂತಿಲ್ಲ. ಮನೆಯಲ್ಲಿ ಎಲ್ಲರೂ ಪ್ರತ್ಯೇಕವಾಗಿ ಹಣ ತೊಡಗಿಸಬಹುದು. ಜಂಟಿ ಖಾತೆದಾರರಾದಲ್ಲಿ ಈ ಲೆಕ್ಕ ಮೊದಲನೆಯವರಿಗೆ ಮಾತ್ರ ಅನ್ವಯಿಸುತ್ತದೆ.

ಪ್ರತಿ ಗ್ರಾಂ ಬಂಗಾರದ ದರವೆಷ್ಟು?
ಇಂಡಿಯ ಬುಲಿಯನ್‌ ಅಂಡ್‌ ಜ್ಯುವೆಲರ್ ಅಸೋಯೇಷನ್‌ ಪ್ರತಿ ವಾರ 999 ಪ್ಯೂರಿಟಿಯ ಬಂಗಾರದ ಸರಾಸರಿ ದರವನ್ನು ಪ್ರಕಟಿಸುತ್ತದೆ. ಈ ಬಾಂಡು ನೀಡುವ ಹಿಂದಿನವಾರದ ದರದ ಪ್ರಕಾರ ನೀವು ಪ್ರತಿ ಗ್ರಾಂಗೆ ತೊಡಗಿಸುವ ಹಣ ನಿರ್ಧಾರವಾಗುತ್ತದೆ.

ಬಡ್ಡಿ ಏನು, ಎತ್ತ?
ನೀವು ಬಂಗಾರ ಖರೀದಿಸಿ ಮನೆಯಲ್ಲಿ ಇಟ್ಟರೆ ಅದಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಇಲ್ಲಿ ನಿಮ್ಮ ಹೆಸರಿನಲ್ಲಿ ಸರ್ಕಾರ ಬಂಗಾರದ ಬಗ್ಗೆ ಪಡೆದ ಹಣಕ್ಕೆ ಶೇ.2.50 ಬಡ್ಡಿ ನೀಡುತ್ತಾರೆ. ಈ ದರ ಸರಣಿಯಿಂದ ಸರಣಿಗೆ ಬದಲಾಗಬಹುದು. ಆದರೆ ನಿರ್ಧಿಷ್ಟ ಸರಣಿಗೆ ಘೋಷಿಸಿದ ಬಡ್ಡಿದರ ಅದು ಮುಗಿಯುವವರೆಗೆ ಬದಲಾಗುವುದಿಲ್ಲ. ಈ ಬಡ್ಡಿಯನ್ನು ನಿಮ್ಮಬ್ಯಾಂಕ್‌ ಖಾತೆಯ ಮೂಲಕ ಪ್ರತಿ ಆರು ತಿಂಗಳಿಗೊಮ್ಮೆ ತೆಗೆದುಕೊಳ್ಳಬಹುದು. ಈ ಬಡ್ಡಿಗೆ ಮಾತ್ರ ನೀವು ವರಮಾನ ತೆರಿಗೆ ಪಾವತಿದಾರರಾದಲ್ಲಿ ಟಿಡಿಎಸ್‌ ಬರಬಹುದು.

ಈ ಬಾಂಡ್‌ ಎಲ್ಲಿ ಪಡೆಯಬಹುದು?
ಎಲ್ಲಾ ಬ್ಯಾಂಕುಗಳಲ್ಲಿ, ಅಂಚೆಕಚೇರಿಗಳಲ್ಲಿ ಸ್ಟಾಕ್‌ ಎಕೆcàಂಜ್‌ಗಳಲ್ಲಿ ಪಡೆಯಬಹುದು. ಅದಕ್ಕಾಗಿಯೇ ನಿರ್ದಿಷ್ಟಪಡಿಸಿದ ಅರ್ಜಿ ತುಂಬಿ, ನಿಮ್ಮ ಖಾತೆಯ ಮೂಲಕವೋ, ಡಿಡಿ ಮುಖಾಂತರ ಹಣ ತೊಡಗಿಸಬಹುದು. ಇದು ಎಂಟುವರ್ಷದ ಅವಧಿಯ ಬಾಂಡು. ಆದರೆ ಐದನೇ ವರ್ಷದಿಂದಲೇ ವಾಪಸ್ಸು ಪಡೆಯಬಹುದು. ವಾಪಸ್ಸು ಪಡೆಯುವಾಗ ಅದರ ಹಿಂದಿನ ವಾರ ಇಂಡಿಯ ಬುಲಿಯನ್‌ ಅಂಡ್‌ ಜ್ಯುವೆಲರ್ ಅಸೋಸಿಯೇಷನ್‌ ಪ್ರಕಟಿಸಿದ 999 ಪ್ಯೂರಿಟಿ ಬಂಗಾರಕ್ಕೆ ಸಮನಾದ ಹಣವನ್ನು ಮತ್ತು ಶೇ.2.50 ಬಡ್ಡಿಯ ಹಣವನ್ನು ಒಟ್ಟಿಗೆ ನೀಡಲಾಗುತ್ತದೆ. ಬಂಗಾರದಿಂದ ಗಳಿಸಿದ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಆದರೆ ಬಡ್ಡಿಯಿಂದ ಬರುವ ಹಣಕ್ಕೆ ನೀವು ಆದಾಯ ತೆರಿಗೆ ಪಾವತಿದಾರರಾದಲ್ಲಿ ಟಿಡಿಎಸ್‌ ಕೊಡಬೇಕಾಗುತ್ತದೆ.
ಈ ಬಾಂಡಿನ ಮೇಲೆ ಸಾಲವೂ ಸಿಗುತ್ತದೆ.  ಇದು ಬಂಗಾರವಿದ್ದಂತೆ. ಈ ಬಾಂಡನ್ನು ಆಧಾರವಾಗಿಟ್ಟುಕೊಂಡು ಬ್ಯಾಂಕುಗಳು ಬಂಗಾರದ ಸಾಲವನ್ನು ನೀಡುತ್ತವೆ. ಸಾಲಕ್ಕೆ ಬಡ್ಡಿ ಇತ್ಯಾದಿಗಳು ನಿಜ ಬಂಗಾರ ಇಟ್ಟುಕೊಂಡು ಸಾಲನೀಡಿದಂತೆ ಇದಕ್ಕೆ ಲಾಗೂ ಆಗುತ್ತದೆ. ರೈತರಾದಲ್ಲಿ ಬಂಗಾರಸಾಲಕ್ಕೆ ಸಿಗುವ ಬಡ್ಡಿ ರಿಯಾಯ್ತಿ ಇದಕ್ಕೂ ಅನ್ವಯಿಸುತ್ತದೆ.

ರಾಮಸ್ವಾಮಿ ಕಳಸವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next