Advertisement

ಸಂಸತ್‌ನ ಚಳಿಗಾಲದ ಅಧಿವೇಶನ ಶುರು : ವಿಪಕ್ಷಗಳ ಕೋಲಾಹಲ

09:56 AM Nov 20, 2019 | Team Udayavani |

ಹೊಸದಿಲ್ಲಿ: ಸುಗಮ ಕಲಾಪದ ನಿರೀಕ್ಷೆಯಿಂದ ಆರಂಭವಾಗಿರುವ ಸಂಸತ್‌ನ ಚಳಿಗಾಲದ ಅಧಿವೇಶನವು ಮೊದಲ ದಿನವೇ ‘ಗದ್ದಲದ ಗೂಡಾಗಿ’ ಮಾರ್ಪಾಡಾಯಿತು. ವಿವಿಧ ವಿಚಾರಗಳನ್ನು ಎತ್ತಿಕೊಂಡು ಕಾಂಗ್ರೆಸ್‌ ಹಾಗೂ ಇತರ ವಿಪಕ್ಷಗಳು ಒಂದೇ ಸಮನೆ ಗದ್ದಲ ಎಬ್ಬಿಸಿದ ಕಾರಣ, ಸದನದಲ್ಲಿ ಕೋಲಾಹಲ ಉಂಟಾಯಿತು. ಲೋಕಸಭೆಯಲ್ಲಿ ಸೋಮವಾರ ಬೆಳಗ್ಗೆ ನಾಲ್ವರು ಸದಸ್ಯರ ಪ್ರಮಾಣ ವಚನ ಹಾಗೂ ಇತ್ತೀಚೆಗೆ ನಿಧನರಾದ ಸಂಸತ್‌ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ವಿಪಕ್ಷಗಳ ಗದ್ದಲ ಆರಂಭವಾಯಿತು.

Advertisement

ಪ್ರಶ್ನೋತ್ತರ ಅವಧಿ ಆರಂಭವಾದ ಕೆಲವೇ ನಿಮಿಷಗಳೊಳಗೆ, ಸುಮಾರು 30 ಮಂದಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಲಾರಂಭಿಸಿದರು. ಸರಕಾರವು ವಿಪಕ್ಷಗಳನ್ನು ಟಾರ್ಗೆಟ್‌ ಮಾಡುತ್ತಿದೆ ಮತ್ತು ಸುಳ್ಳು ಕೇಸು ದಾಖಲು ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾರಂಭಿಸಿದರು.

ಇದೇ ವೇಳೆ, ನ್ಯಾಷನಲ್‌ ಕಾನ್ಫರೆನ್ಸ್‌ ಸದಸ್ಯರು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾರ ಬಿಡುಗಡೆಗೆ ಆಗ್ರಹಿಸಿದರೆ, ಪಿಡಿಪಿ ಸದಸ್ಯರು ವಿಶೇಷ ಸ್ಥಾನಮಾನ ರದ್ದು ಖಂಡಿಸಿ ಘೋಷಣೆ ಕೂಗಲಾರಂಭಿಸಿದರು. ಇದರ ನಡುವೆಯೇ, ಮಹಾರಾಷ್ಟ್ರದಲ್ಲಿ ರೈತರಿಗೆ ಪರಿಹಾರ ನೀಡುವಂತೆ ಕೋರಿ ಶಿವಸೇನೆ ಸಂಸದರೂ ಸದನದ ಬಾವಿಗಿಳಿದರು. ಸ್ಪೀಕರ್‌ ಓಂ ಬಿರ್ಲಾ ಅವರು ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಿಸಲು ನಡೆಸಿದ ಯತ್ನವೆಲ್ಲ ವಿಫ‌ಲವಾಯಿತು. ಈ ಅವಧಿಯಲ್ಲಿ ಪ್ರಧಾನಿ ಮೋದಿ ಸದನದಲ್ಲಿ ಹಾಜರಿರಲಿಲ್ಲ.

ಆರ್ಥಿಕ ಹಿಂಜರಿತ ಇಲ್ಲ: ಭಾರತವು ಶೇ.5ರಷ್ಟು ಆರ್ಥಿಕ ಹಿಂಜರಿತ ಎದುರಿಸುತ್ತಿಲ್ಲ. ಬದಲಿಗೆ ಅತಿ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ ಎಂದು ಲೋಕಸಭೆಗೆ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದ್ದಾರೆ. ಜತೆಗೆ, 2025ರೊಳಗೆ ಭಾರತ 5 ಲಕ್ಷಕೋಟಿ ಡಾಲರ್‌ ಆರ್ಥಿಕತೆಯಾಗಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪ್ರದಾಯ ಮುರಿದು ಶ್ರದ್ಧಾಂಜಲಿ: ರಾಜ್ಯಸಭೆಯಲ್ಲಿ ಈ ಬಾರಿ ಸಂಪ್ರದಾಯ ಬದಿಗೆ ಸರಿಸಿ, ಮೃತ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶವನ್ನು ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ಒದಗಿಸಲಾಯಿತು. ಅದರಂತೆ, ವಿವಿಧ ನಾಯಕರು ಮಾಜಿ ಸಚಿವ ಅರುಣ್‌ ಜೇಟ್ಲಿ, ರಾಮ್‌ ಜೇಠ್ಮಲಾನಿ ಸೇರಿದಂತೆ ನಿಧನರಾದ ಸದಸ್ಯರ ಕುರಿತು ಮಾತನಾಡಿ, ಶ್ರದ್ಧಾಂಜಲಿ ಸಲ್ಲಿಸಿದರು. ಸಾಮಾನ್ಯವಾಗಿ ಸಭಾಧ್ಯಕ್ಷರೇ ಮೃತರ ಕುರಿತು ಪ್ರಸ್ತಾವಿಸಿ, ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರು.

Advertisement

ಸಂಸದರಿಂದ ಮಾಲಿನ್ಯ ಜಾಗೃತಿ ಅಭಿಯಾನ
ವಾಯುಮಾಲಿನ್ಯದಿಂದ ಕಂಗೆಟ್ಟಿರುವ ದಿಲ್ಲಿಯಲ್ಲಿ ಸೋಮವಾರ ಅನೇಕ ಸಂಸದರು ಅಧಿವೇಶನಕ್ಕೆ ಮಾಸ್ಕ್ ಧರಿಸಿಕೊಂಡು, ಸೈಕಲ್‌, ಇ-ಕಾರು ಓಡಿಸಿಕೊಂಡು ಬರುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ.

ಮಾಲಿನ್ಯ ಮಟ್ಟ ಏರಿಕೆ ಖಂಡಿಸಿ ಪ್ರತಿಭಟನಾರ್ಥವಾಗಿ ಕಾಂಗ್ರೆಸ್‌ ಸಂಸದ ಗೌರವ್‌ ಗೊಗೋಯ್‌ ಮಾಸ್ಕ್ ಧರಿಸಿಕೊಂಡು ಮಹಾತ್ಮನ ಪ್ರತಿಮೆ ಮುಂದೆ ನಿಂತಿದ್ದರು. ಬಿಜೆಪಿ ಸಂಸದರಾದ ಮನ್ಸುಕ್‌ ಮಾಂಡವೀಯ ಮತ್ತು ಮನೋಜ್‌ ತಿವಾರಿ ಅವರು ಬೈಸಿಕಲ್‌ ತುಳಿಯುತ್ತಾ ಸಂಸತ್‌ಗೆ ಬಂದರು. ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ವಿದ್ಯುತ್‌ಚಾಲಿತ ಕಾರಿನಲ್ಲಿ ಆಗಮಿಸಿದರು.

ಮೇಲ್ಮನೆ ಮಾರ್ಷಲ್‌ಗ‌ಳ ಸಮವಸ್ತ್ರಕ್ಕೆ ಹೊಸ ಸ್ಪರ್ಶ


ರಾಜ್ಯಸಭೆಯು ಸೋಮವಾರ 250ನೇ ಅಧಿವೇಶನಕ್ಕೆ ಸಾಕ್ಷಿಯಾಗುತ್ತಿದ್ದಂತೆ, ಇಲ್ಲಿ ಕಾರ್ಯನಿರ್ವಹಿಸುವ ಮಾರ್ಷಲ್‌ಗ‌ಳ ವೇಷಭೂಷಣಕ್ಕೆ ಹೊಸ ಸ್ಪರ್ಶ ಸಿಕ್ಕಿದೆ. ಈವರೆಗೆ ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾರ್ಷಲ್‌ಗ‌ಳು ಸೋಮವಾರ ಸೇನೆಯ ಮಾದರಿಯ ಸಮವಸ್ತ್ರದ ಜತೆಗೆ ಕ್ಯಾಪ್‌ ಧರಿಸಿಕೊಂಡು ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.

ಇವರು ಮಿಲಿಟರಿ ಗ್ರೀನ್‌(ಸೇನೆಯ ಸಮವಸ್ತ್ರದ ಮಾದರಿಯ ಹಸುರು ಬಣ್ಣದ ಉಡುಗೆ) ಸಮವಸ್ತ್ರ ಹಾಗೂ ತಲೆಗೊಂದು ಕ್ಯಾಪ್‌ ಧರಿಸಿಕೊಂಡು ನಡೆದು ಬರುತ್ತಿದ್ದರೆ, ಸದಸ್ಯರೆಲ್ಲರೂ ಅಚ್ಚರಿಯಿಂದ ಪರಸ್ಪರ ಮುಖ ಮುಖ ನೋಡಿಕೊಂಡರು. ಈ ಹಿಂದೆ ಮಾರ್ಷಲ್‌ಗ‌ಳು ಬೇಸಗೆಯಲ್ಲಿ ಸಫಾರಿ ಸೂಟ್‌ ಧರಿಸುತ್ತಿದ್ದರೆ, ಚಳಿಗಾಲದ ಅಧಿವೇಶನದ ವೇಳೆ ಬಂಧಗಾಲಾ ಮತ್ತು ಟರ್ಬನ್‌ ಧರಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next