Advertisement

ಆತ್ಮಚರಿತ್ರೆ ಬರೆಯುತ್ತಾರಂತೆ “ದುನಿಯಾ’ವಿಜಯ್‌

11:51 AM Mar 22, 2017 | |

“ಈಗನಿಸುತ್ತೆ 10 ವರ್ಷಗಳನ್ನ ವೇಸ್ಟ್‌ ಮಾಡಿ ಬಿಟ್ಟೆ …’ ಹಾಗಂತ ಉದ್ಗರಿಸಿದರು “ದುನಿಯಾ’ ವಿಜಯ್‌. ಅವರಿಗೆ ಈ 10 ವರ್ಷಗಳಲ್ಲಿ ಒಂದು ವಿಷಯ ಬಹಳ ಸ್ಪಷ್ಟವಾಗಿದೆ. ಅದೇ ಓದಿನ ಮಹತ್ವ. ವಿಜಯ್‌ ಮುಂಚೆ ಆಧ್ಯಾತ್ಮಿಕ ಪುಸ್ತಕಗಳನ್ನು ಓದುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಈಗ ಸಾಹಿತ್ಯದ ಕಡೆಗೆ ಅವರ ಮನಸ್ಸು ಹರಿದಿದೆ.

Advertisement

“ಟ್ರೆಂಡ್‌ ಬದಲಾಗಿದೆ. ಮುಂಚಿನ ತರಹ ಓಯ್ತದೆ, ಬರ್ತದೆ ಎಂದು ಸಂಭಾಷಣೆ ಹೇಳ್ಳೋಕ್ಕಾಗಲ್ಲ. ಭಾಷೆಯಲ್ಲಿ ಸ್ಪಷ್ಟತೆ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಾಜ್ಞಾನ ಇರಬೇಕು. ಅದಕ್ಕೇ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದೀನಿ. ಫೋನ್‌, ಇಂಟರ್‌ನೆಟ್‌ ಎಲ್ಲವನ್ನೂ ದೂರ ಇಟ್ಟು, ಓದುವುದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೀನಿ’ ಎನ್ನುತ್ತಾರೆ ವಿಜಯ್‌.

ಪುಸ್ತಕ ಬರೆಯೋ ಯೋಚನೆ ಇದೆ: ಹಾಗೆ ಮಾಡುವುದಕ್ಕೆ ವಿಜಯ್‌ ಅವರಿಗೆ ಒಂದು ಕಾರಣವೂ ಇದೆ. ಅದೇನೆಂದರೆ, ವಿಜಯ್‌ ತಮ್ಮ ಆತ್ಮಚರಿತ್ರೆ ಬರೆಯುವುದಕ್ಕೆ ಯೋಚನೆ ಮಾಡುತ್ತಿದ್ದಾರೆ. ಅದರ ಸಿದ್ಧತೆಗೆ ಈ ಓದು ಎಂದರೆ ತಪ್ಪಿಲ್ಲ. “ಹೆಚ್ಚಿನವರಿಗೆ ನನ್ನ ಬಗ್ಗೆ ಗೊತ್ತಿಲ್ಲ. ನನ್ನ ಶೈಲಿ ನೋಡಿ ಎಲ್ಲರಿಗೂ ನನ್ನ ಬಗ್ಗೆ ಬೇರೆಯದೇ ಅಭಿಪ್ರಾಯವಿದೆ. ನಾನು ಹಾಗಲ್ಲ ಎಂದು ಹೇಳಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.

ಹಾಗಾಗಿ ನನ್ನ ಜೀವನದಲ್ಲಿ ಏನೇನು ನಡೆಯಿತೋ, ಅದನ್ನೆಲ್ಲಾ ಪುಸ್ತಕ ರೂಪದಲ್ಲಿ ಮುಂದೊಂದು ದಿನ ಹೊರತರುವಾಸೆ. ಇನ್ನು ನನ್ನ ಜೀವನದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಅವನ್ನೆಲ್ಲಾ ವಿವರವಾಗಿ ಹೇಳಬೇಕು. ಹಾಗಾಗಿ ಅದಕ್ಕೆ ಭಾಷೆ ಚೆನ್ನಾಗಿರಬೇಕು. ಆ ಭಾಷಾಜ್ಞಾನಕ್ಕಾಗಿಯೇ ಹೆಚ್ಚು ಓದುತ್ತಿದ್ದೀನಿ’ ಎನ್ನುತ್ತಾರೆ ವಿಜಯ್‌.

ಸೋಷಿ ಯಲ್‌ ಮೀಡಿಯಾ ದಿಂದ ದೂರ: ಮೊದಲೇ ಹೇಳಿದಂತೆ ಫೋನ್‌, ಸೋಷಿ ಯಲ್‌ ಮೀಡಿಯಾ ಎಲ್ಲದರಿಂದಲೂ ದೂರ ಆಗಿದ್ದಾರಂತೆ ವಿಜಯ್‌. “ಮೊದಲು ಫೋನ್‌ ಚಟ ಬಿಡಬೇಕು. ನಮ್ಮಲ್ಲಿ ಸುಮ್ಮನೆ ಫೋನ್‌ ಉಪಯೋಗಿಸುತ್ತಲೇ ಇರುತ್ತಾರೆ. ಅಗತ್ಯ ಇದ್ದರೆ ಓಕೆ. ಅಗತ್ಯವಿಲ್ಲದಿದ್ದರೂ ಸೋಷಿಯಲ್‌ ಮೀಡಿಯಾಗೆ ಅಂಟುಕೊಂಡೇ ಇರುತ್ತಾರೆ. ಬರೀ ಫೋನ್‌ ಒಂದೇ ಜೀವನವಲ್ಲ.

Advertisement

ಜೀವನದಲ್ಲಿ ಮುಖ್ಯವಾಗಿದ್ದು ಇನ್ನೂ ಏನೇನೋ ಇದೆ. ಅದನ್ನೆಲ್ಲಾ ಬಿಟ್ಟು, ಸದಾ ಫೋನ್‌ ಹಿಡಿದುಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರಿಂದ ಬೇಸರವಾಗಿ ನಾನು ಸೋಷಿಯಲ್‌ ಮೀಡಿಯಾದಿಂದ ಸಂಪೂರ್ಣವಾಗಿ ಹೊರ ಬಂದಿದ್ದೇನೆ.  ಫೋನ್‌ ಎಷ್ಟು ಬೇಕೋ ಅಷ್ಟು ಉಪಯೋಗಿಸುತ್ತಿದ್ದೇನೆ. ನನ್ನ ಮಕ್ಕಳಿಂದಲೂ ದೂರ ಇಟ್ಟಿದ್ದೇನೆ’ ಎಂದು ನೇರವಾಗಿಯೇ ಹೇಳುತ್ತಾರೆ ವಿಜಯ್‌.

ಪ್ಯಾಶನ್‌ಗಿಂಥ ಫ್ಯಾಶನ್‌ ಹೆಚ್ಚು: ಇನ್ನು ಚಿತ್ರರಂಗದಲ್ಲಿ ನಾಯಕನಾಗಿ ಅವರು 10 ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಹತ್ತು ವರ್ಷಗಳಲ್ಲಿ ಜೀವನ ಸಾಕಷ್ಟು ಕಲಿಸಿದೆ ಎನ್ನುವ ಅವರು, “ಈ 10 ವರ್ಷಗಳಲ್ಲಿ ಎಲ್ಲವನ್ನೂ ನೋಡಿದ್ದೀನಿ. ಬಹಳ ಖುಷಿಯಾಗಿದ್ದೀನಿ. ಎಲ್ಲಕ್ಕಿಂತ ಹೆಚ್ಚಾಗಿ ಲೈಫ್ಸ್ಟೈಲ್‌ ಬದಲಿಸಿಕೊಳ್ಳುತ್ತಿದ್ದೀನಿ.

ನಾನು ಗಮನಿಸಿರುವಂತೆ ಚಿತ್ರರಂಗಕ್ಕೆ ಬರುವವರಿಗೆ ಪ್ಯಾಶನ್‌ಗಿಂಥ ಫ್ಯಾಶನ್‌ ಜಾಸ್ತಿಯಾಗಿದೆ. ಬರೀ ಜಿಮ್‌ಗೆ ಹೋಗಿ, ಅಬxಮನ್‌ ಬೆಳೆಸಿಕೊಳ್ಳೋದಷ್ಟೇ ಅಲ್ಲ. ಹೆಣ್ಮಕ್ಕಳೂ ಅಷ್ಟೇ. ಬರೀ ಗ್ಲಾಮರ್‌ವೊಂದೇ ಮುಖ್ಯವಲ್ಲ. ಈ 10 ವರ್ಷಗಳಲ್ಲಿ ಸಾಕಷ್ಟು ಜನ ಚಿತ್ರರಂಕ್ಕೆ ಬಂದಿದ್ದಾರೆ. ಆದರೆ, ಇಲ್ಲೆಷ್ಟು ಜನ ಗಟ್ಟಿಯಾಗಿ ನೆಲೆಯೂರಿದ್ದಾರೆ. 

ಅವಕಾಶಕ್ಕಾಗಿ ಏನು ಮಾಡೋಕೆ ಸಿದ್ಧ ಅನ್ನೋದಲ್ಲ. ಅದಕ್ಕೆ ಒಂದಿಷ್ಟು ತಯಾರಿ ಬೇಕು. ಪ್ರಮುಖವಾಗಿ ರಂಗಭೂಮಿ ಒಡನಾಟ ಇರಬೇಕು. ಪ್ರತಿಭೆ ಇದ್ದರೆ ಅವಕಾಶ, ಇಲ್ಲದಿದ್ದರೆ ವಾಶೌಟ್‌ ಆಗುತ್ತಾರೆ. ಹಾಗಾಗಿ ಒಂದಿಷ್ಟು ಸೂಕ್ತ ತರಬೇತಿ ಪಡೆದು ಬನ್ನಿ. ಆಗ ಸ್ವಲ್ಪ ಕಷ್ಟವಾದರೂ, ಹೆಚ್ಚು ದಿನ ಇರುತ್ತಾರೆ’ ಎನ್ನುತ್ತಾರೆ ವಿಜಯ್‌.

Advertisement

Udayavani is now on Telegram. Click here to join our channel and stay updated with the latest news.

Next