ನವದೆಹಲಿ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೇ 3ರವರೆಗೆ ಲಾಕ್ ಡೌನ್ ಮುಂದುವರಿಸಿದ್ದು, ಮತ್ತೊಂದೆಡೆ ರೆಸ್ಟೋರೆಂಟ್ ತೆರೆಯಲು, ಸಮ,ಬೆಸ ಆಧಾರದಲ್ಲಿ ಖಾಸಗಿ ವಾಹನಗಳ ಸಂಚಾರ, ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಕೇರಳ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೇಂದ್ರದ ನಿಯಮಾವಳಿಯನ್ನು ದುರ್ಬಲಗೊಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕೇರಳ ಸರ್ಕಾರ ಕೇಂದ್ರ ಗೃಹ ಸಚಿವಾಲಯ ಬರೆದ ಪತ್ರದಲ್ಲಿ, ಏಪ್ರಿಲ್ 15ರಂತೆ ಕೇಂದ್ರ ಸರ್ಕಾರ ಯಾವ ಚಟುಟಿಕೆ ನಿಷೇಧಿಸಬೇಕು ಎಂಬ ಪರಿಷ್ಕೃತ ನಿಯಮಾವಳಿಯನ್ನು ಕಳುಹಿಸಿದ್ದು ಅದನ್ನು ಏಪ್ರಿಲ್ 17ರಂದು ರಾಜ್ಯ ಸರ್ಕಾರಗಳು ಕೂಡಾ ಅನುಷ್ಠಾನಕ್ಕೆ ತಂದಿದ್ದವು ಎಂದು ತಿಳಿಸಿದೆ.
ಇದೀಗ ಕೇರಳ ಸರ್ಕಾರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಳೀಯ ಅಂಗಡಿಗಳು, ಕ್ಷೌರಿಕರ ಅಂಗಡಿಗಳು, ರೆಸ್ಟೋರೆಂಟ್ಸ್, ಬುಕ್ ಸ್ಟೋರ್, ನಗರದೊಳಗೆ ಬಸ್ ಸಂಚಾರ, ಸ್ಕೂಟರ್ ಸವಾರರಿಗೆ ಅನುಮತಿ ನೀಡಿದೆ ಎಂದು ತಿಳಿಸಿದೆ.
2005ರ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕೇರಳ ಸರ್ಕಾರ ಕೇಂದ್ರ ಗೃಹ ಸಚಿವಾಲಯ ಏಪ್ರಿಲ್ 15ರಂದು ಜಾರಿಗೊಳಿಸಿರುವ ಆದೇಶವನ್ನು ಉಲ್ಲಂಘಿಸಿ, ಕೇಂದ್ರದ ನಿಯಮಾವಳಿಯನ್ನು ದುರ್ಬಲಗೊಳಿಸಿದೆ ಎಂದು ದೂರಿದೆ. ಸೋಮವಾರದಿಂದ ಹಂತಹಂತವಾಗಿ ಯಾವೆಲ್ಲ ಚಟುವಟಿಕೆಗೆ ಅನುಮತಿ ನೀಡಲಾಗಿದೆ ಎಂಬುದನ್ನು ಕೇರಳ ಸರ್ಕಾರ ನಿಯಮಾವಳಿ ಬಿಡುಗಡೆ ಮಾಡಿದೆ ಎಂದು ವಿವರಿಸಿದೆ.
ಕಾಸರಗೋಡು, ಕಣ್ಣೂರು, ಕೋಝಿಕೋಡ್, ಮಲಪ್ಪುರಂ ರೆಡ್ ಜೋನ್ ಆಗಿದ್ದು ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ನಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ.