Advertisement

ಡೋಕ್‌ಲಾಂ: ಭಾರತದ ವಿರುದ್ಧ ಚೀನದ ತ್ರಿವಿಧ ಮನೋಸಮರ ತಂತ್ರಗಾರಿಕೆ

03:29 PM Aug 07, 2017 | Team Udayavani |

ಹೊಸದಿಲ್ಲಿ : ಭಾರತ – ಚೀನ ಸೇನೆಗಳ ಮುಖಾಮುಖೀ ಸಿಕ್ಕಿಂ ಗಡಿಯಲ್ಲಿನ ಡೋಕ್‌ಲಾಂ ನಲ್ಲಿ  ಕಳೆದ ಎರಡು ತಿಂಗಳಿಂದಲೂ ಅವಿರತವಾಗಿ ಹಾಗೆಯೇ ಮುಂದುವರಿದಿದೆ. ಎರಡೂ ದೇಶಗಳಿಗೆ ಯುದ್ಧ ಬೇಕಾಗಿಲ್ಲ ಎನ್ನುವುದು ನಿಜವೇ ಆದರೂ ಚೀನ, ಭಾರತದ ಮೇಲೆ ತ್ರಿವಿಧ ಮನೋಸಮರ ತಂತ್ರಗಾರಿಕೆಯನ್ನು ಅನುಸರಿಸಲು ಸಿದ್ಧವಾಗಿದೆ.

Advertisement

ಡೋಕ್‌ಲಾಂ ವಿವಾದಿತ ಪ್ರದೇಶ ಭೂತಾನ್‌ಗೆ ಸೇರಿದ್ದಾಗಿದ್ದು ಅಲ್ಲಿ ಚೀನ ರಸ್ತೆ ನಿರ್ಮಿಸಿದಲ್ಲಿ ಭೂತಾನ್‌ – ಭಾರತ ನಡುವಿನ ಗಡಿ ಪ್ರದೇಶದ ಭೂಸಂಪರ್ಕ ಕಡಿದು ಹೋಗುತ್ತದೆ. ಭೂತಾನ್‌, ಡೋಕ್‌ಲಾಂ ತನ್ನದೆಂದು ಹೇಳಿಕೊಂಡಿದೆಯಾದರೂ ಅದಕ್ಕೆ ಚೀನದೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಪರ್ಕ ಇಲ್ಲ. ಹಾಗಾಗಿ  ಭೂತಾನ್‌ ತನಗೆ ದೊಡ್ಡಣ್ಣನಾಗಿರುವ ಮತ್ತು  ತನ್ನ ಭದ್ರತಾ ಹಿತಾಸಕ್ತಿಯನ್ನು ರಕ್ಷಿಸುತ್ತಿರುವ ಭಾರತದ ಮೂಲಕ ಚೀನದೊಡನೆ ಪರೋಕ್ಷ ರಾಜತಾಂತ್ರಿಕ ಸಂಪರ್ಕ ಹೊಂದಿದೆ. 

ವಿವಾದಿತ ಡೋಕ್‌ಲಾಂ ನಲ್ಲಿ ಚೀನ ರಸ್ತೆ ನಿರ್ಮಾಣ ಕಾರ್ಯವನ್ನು ತಡೆಹಿಡಿರುವ ಭಾರತೀಯ ಸೇನೆ ಜಪ್ಪಯ್ಯ ಎಂದರೂ ತಾನು ನಿಂತ ಸ್ಥಳದಿಂದ ಕದಲದಿರುವುದು ಚೀನಕ್ಕೆ ಅಚ್ಚರಿ ಉಂಟುಮಾಡಿದೆ. ಹೀಗೆ ನೆಲಕ್ಕಂಟಿ ನಿಂತಿರುವ ಭಾರತೀಯ ಸೇನೆಯನ್ನು ಡೋಕ್‌ಲಾಂನಿಂದ ತೆರವು ಗೊಳಿಸಲು ಚೀನ ಸಣ್ಣ ಮಟ್ಟದ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಚೀನ ಮಾಧ್ಯಮ ಎಚ್ಚರಿಸಿತ್ತು. ಈಗ ಚೀನ ಸರಕಾರ ಅದನ್ನೂ ಬಯಸುತ್ತಿಲ್ಲ ಎಂದು ತಿಳಿಯಲಾಗಿದೆ.

ಹಾಗಿದ್ದರೂ ಭಾರತಕ್ಕೆ ಪಾಠ ಕಲಿಸುವ ಸಲುವಾಗಿ ಚೀನ ಮೂರು ಆಯಾಮಗಳ ಮನೋಸಮರ ತಂತ್ರಗಾರಿಕೆ ಕೈಗೊಳ್ಳುವ ಚಿಂತನೆ ನಡೆಸಿರುವುದಾಗಿ ಗೊತ್ತಾಗಿದೆ. ಈ ತಂತ್ರಗಾರಿಕೆಯು ಸಾನ್‌ ಝೋಂಗ್‌ ಝಾನ್‌ಫಾ ತಂತ್ರಗಾರಿಕೆ ಎಂದು ಪ್ರಸಿದ್ಧವಾಗಿದೆ. ಅದರ ವಿಧಾನ ಈ ರೀತಿ ಇದೆ : 

1. ವ್ಯೂಹಾತ್ಮಾಕ ಮಾನಸಿಕ ಕಾರ್ಯಾಚರಣೆ.
2. ಮಾಧ್ಯಮಗಳ ಮೂಲಕ ಸಮರ ಭಯ ಹುಟ್ಟಿಸುವ ಕಾರ್ಯಾಚರಣೆ
3. ವಿದೇಶೀ ವೀಕ್ಷಕರು ಮತ್ತು ಪರಿಣತರ ದೃಷ್ಟಿಕೋನವನ್ನು ಬದಲಾಯಿಸುವ ಕಾನೂನು ರೀತ್ಯಾ ಸಮರ ಕಾರ್ಯಾಚರಣೆ.

Advertisement

ಚೀನ ಭಾರತದೊಂದಿಗಿನ ತನ್ನ ಆಯಕಟ್ಟಿನ ಗಡಿಯಲ್ಲಿ ಸಮರ ಸಿದ್ಧತೆ, ಸನ್ನದ್ಧತೆಯ ಪರೀಕ್ಷೆ, ಕವಾಯತು ಇತ್ಯಾದಿ ನಡೆಸುವುದನ್ನು ತೋರಿಸುವ ವಿಡಿಯೋ ಚಿತ್ರಿಕೆಗಳನ್ನು ನಿರಂತರವಾಗಿ ಬಿಡುಗಡೆ ಮಾಡುವುದು ಮತ್ತು ಗಡಿ ಪ್ರದೇಶದಲ್ಲಿನ ಭಾರತೀಯ ವಾಸಿಗಳಲ್ಲಿ ಸಮರ ಭಯ ಸೃಷ್ಟಿಸಿ ಭಾರತದ ಸರಕಾರದ ಮೇಲೆ ಪರೋಕ್ಷ ಒತ್ತಡವನ್ನು ತರುವುದು -ಇದು ಚೀನದ ವ್ಯೂಹಾತ್ಮಕ ಮಾನಸಿಕ ಸಮರ ಕಾರ್ಯಾಚರಣೆಯ ಭಾಗವಾಗಿದೆ.

ತನ್ನ ಮಾಧ್ಯಮಗಳ ಮೂಲಕ ಭಾರತಕ್ಕೆ 1962ರ ಸಮರದ ಕಹಿ ಅನುಭವವನ್ನು ನೆನಪಿಸಿಕೊಡುವ ರೀತಿಯಲ್ಲಿ ತನ್ನ  ಮಾಧ್ಯಮವನ್ನು ಬಳಸಿಕೊಳ್ಳುವುದು ಚೀನದ ಮಾಧ್ಯಮ ಸಮರ ತಂತ್ರಗಾರಿಕೆಯಾಗಿದೆ. 

ಮೂರನೇಯ ಕಾನೂನು ರೀತ್ಯಾ ಸಮರ ತಂತ್ರಗಾರಿಕೆಯ ಅಂಗವಾಗಿ ಶತ್ರುವನ್ನು ಬೆದರಿಸಿ ಅದರ ಇನ್ನಷ್ಟು ಭೂಭಾಗಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಕಾನೂನು ಹೋರಾಟವನ್ನು ನಡೆಸುವುದು – ಇದು ಚೀನದ 3ನೇ ಬಗೆಯ ಸಮರ ಹುನ್ನಾರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next