ರಾಯಚೂರು: ಜೀವದ ಹಂಗು ತೊರೆದು ಕುಟುಂಬವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುವ ಪೊಲೀಸರು, ಗಡಿ ಕಾಯುವ ಸೈನಿಕರು ದೇಶದ ಕಣ್ಣುಗಳಿದ್ದಂತೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶರಾದ ನ್ಯಾ| ಮಲ್ಲಿಕಾರ್ಜುನ ಗೌಡ ಅಭಿಪ್ರಾಯ ಪಟ್ಟರು.
ನಗರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರಿಗೆ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು.
ಸೈನಿಕರು, ಪೊಲೀಸರು ಸಮರ್ಥವಾಗಿ ದೇಶ ಕಾಯುವುದರಿಂದ ಇಂದು ನಾವು ನೀವೆಲ್ಲರೂ ನಮ್ಮ ಕುಟುಂಬಗಳ ಜತೆ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ. ಸಮಾಜಕ್ಕಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಪೊಲೀಸರ ತ್ಯಾಗ ದೊಡ್ಡದು. ಕಳೆದ ಒಂದು ವರ್ಷದಲ್ಲಿ ನೂರಾರು ಪೊಲೀಸರು ಹುತಾತ್ಮರಾಗಿದ್ದು ನೋವಿನ ಸಂಗತಿಯಾಗಿದೆ. ಯಾರು ತ್ಯಾಗಿಯಾಗುತ್ತಾರೋ ಅವರು ಯೋಗಿಯಾಗುತ್ತಾರೆ. ಯಾರು ಭೋಗಿಯಾಗುತ್ತಾರೋ ಅವರು ರೋಗಿಯಾಗುತ್ತಾರೆ. ಮನುಷ್ಯ ಪರೋಪಕಾರಿಯಾದರೆ ಮಾತ್ರ ಸಮಾಜ ಅವರನ್ನು ಸ್ಮರಿಸಲು ಸಾಧ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಮ್ ಪ್ರಕಾಶ್ ಅಮ್ರಿತ್ ಮಾತನಾಡಿ, ಪೊಲೀಸ್ ಸಮವಸ್ತ್ರದಲ್ಲಿ ಹುತಾತ್ಮರಾಗುವ ಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ. ಕಳೆದ ಒಂದು ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ ಎಂಟು ಸೇರಿದಂತೆ ದೇಶದಲ್ಲಿ ಕೊರೊನಾ ವೈರಸ್‌ಗೆ 377 ಪೊಲೀಸರು ಬಲಿಯಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಪೊಲೀಸ್ ಹುತಾತ್ಮ ದಿನಾಚರಣೆ ಪ್ರಯುಕ್ತ ಸ್ಮರಣ ಸ್ತಂಭಕ್ಕೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಶ್ ಬಾಬು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಇದ್ದರು.