ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯ ವಿಚಾರದಲ್ಲಿ ಇತ್ತೀಚೆಗೆ ಪಶು ಸಂಗೋಪನ ಸಚಿವ ಕೆ. ವೆಂಕಟೇಶ್ ನೀಡಿರುವ ಹೇಳಿಕೆಯು ರಾಜಕೀಯ ಕಿಚ್ಚು ಹೊತ್ತಿಸಿದೆ. ಆಡಳಿತಾರೂಢ ಕಾಂಗ್ರೆಸ್ ಸರಕಾರದ ವಿರುದ್ಧ ವಿಪಕ್ಷ ಬಿಜೆಪಿ ಕೆಂಡಕಾರಿದ್ದು, ಎರಡೂ ಪಕ್ಷಗಳ ನಡುವಿನ ವಾಕ್ಸಮರ ಸೋಮವಾರವೂ ಮುಂದುವರಿದಿದೆ. ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಯನ್ನೂ ಆರಂಭಿಸಿದೆ.
ವಿವಾದದ ಕುರಿತು ಸೋಮವಾರ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 1964ರಲ್ಲೇ ಜಾರಿಗೆ ಬಂದಿರುವ ಜಾನುವಾರು ಸಂರಕ್ಷಣ ಕಾಯ್ದೆಯಲ್ಲೇ 12 ವರ್ಷ ಮೇಲ್ಪಟ್ಟ, ವ್ಯವಸಾಯಕ್ಕೆ ಬಳಸಲು ಆಗದಂತಹ ರಾಸುಗಳ ವಧೆ ಮಾಡಲು ಅವಕಾಶ ಇದೆ. ಆ ಕಾಯ್ದೆಗೆ ತಿದ್ದುಪಡಿ ಆಗಿತ್ತು. ಬಿಜೆಪಿಯವರು ಮತ್ತೆ ತಿದ್ದುಪಡಿ ಮಾಡಿ, ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು. ಕಾಯ್ದೆಯಲ್ಲಿ ಇರುವುದನ್ನೇ ಸಚಿವ ವೆಂಕಟೇಶ್ ಹೇಳಿದ್ದಾರೆ ಎಂದಿದ್ದಾರೆ.
ಬೀದಿಗಿಳಿದು ಹೋರಾಟ
ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಸರಕಾರದ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಸಚಿವ ವೆಂಕಟೇಶ್ ಹೇಳಿಕೆಯನ್ನು ನೋಡಿದರೆ ದೇಶದ ಸಂಸ್ಕೃತಿಯ ಅರಿವು, ಕಾಳಜಿ ಅವರಿಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈ ರೀತಿಯ ಉಡಾಫೆ ಹೇಳಿಕೆಯನ್ನು ರಾಜ್ಯದ ಜನ ನಿರೀಕ್ಷಿಸಿರಲಿಲ್ಲ. ಹಿಂದೂ ಸಂಸ್ಕೃತಿ, ಪರಂಪರೆ ಗೊತ್ತಿದ್ದರೆ ಅವರು ಈ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಕಾಂಗ್ರೆಸ್ ಸರಕಾರದ ನಿಲುವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದಿದ್ದಾರೆ.
Related Articles
ಕಾಂಗ್ರೆಸ್ ದೇಶವನ್ನಾಗಲೀ, ಗೋವನ್ನಾಗಲೀ ಪ್ರೀತಿಸಲಿಲ್ಲ. ಹೀಗಾಗಿಯೇ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ. ಕಾಯ್ದೆಯನ್ನು ವಾಪಸ್ ಪಡೆಯಲು ನಾವು ಬಿಡುವುದಿಲ್ಲ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ಗೆ ಈಗಾಗಲೇ ಅಧಿಕಾರದ ಅಮಲು ಏರಿದೆ. ಒಬ್ಬೊಬ್ಬ ಸಚಿವರು ಒಂದೊಂದು ವಿವಾದಾತ್ಮಕ ಮತ್ತು ಜನವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ನೋಡಿದರೆ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ದಿನಗಳು ಬರುವ ಆತಂಕ ಕಾಣುತ್ತಿದೆ.
– ಬಸವರಾಜ ಬೊಮ್ಮಾಯಿ,
ಮಾಜಿ ಮುಖ್ಯಮಂತ್ರಿ