ಗಾಂಧರ್ವ ಪದ್ಧತಿಯ ವಿವಾಹ ಅಂದರೆ ಪ್ರೇಮ ವಿವಾಹಕ್ಕೂ ಅವಕಾಶವಿದೆ. ರಾಕ್ಷಸ ವಿವಾಹವೂ ಇತ್ತು. ಅಂದರೆ, ರಹಸ್ಯವಾಗಿ ಅಪಹರಿಸಿ, ಬಲಾತ್ಕಾರಿಂದ ಮದುವೆಯಾಗುವುದು. ಇದರಲ್ಲೆಲ್ಲ ಸ್ವಯಂವರ ಅತಿಹೆಚ್ಚು ಬಳಕೆಯಲ್ಲಿತ್ತು. ಬಲಪ್ರಯೋಗ ನಡೆಯುವುದು ಆಗಾಗ ನಡೆಯುತ್ತಿದ್ದ ಸಮಾಚಾರ. ಇಂತಹದ್ದೇ ಒಂದು ಬಲಪ್ರಯೋಗ ಭೀಷ್ಮ ಮಾಡುತ್ತಾನೆ.
ಕಾಶೀರಾಜನ ಮೊದಲನೇ ಮಗಳು ಅಂಬೆಯನ್ನೇನೋ ಭೀಷ್ಮ ಗೆದ್ದು, ಹೆಚ್ಚುಕಡಿಮೆ ಬಲಾತ್ಕಾರವಾಗಿ ಹಸ್ತಿನಾವತಿಗೆ ಕರೆದುಕೊಂಡು ಹೋದನು. ಆ ಕಾಲದಲ್ಲಿನ ಕ್ಷತ್ರಿಯ ನಿಯಮಗಳೇ ಹಾಗಿದ್ದವು. ಸ್ತ್ರೀಯರನ್ನು ಯಾರು ತನ್ನ ಶೌರ್ಯ, ಪರಾಕ್ರಮದಿಂದ ಗೆಲ್ಲುತ್ತಾನೋ, ಅವನ ವಶಕ್ಕೆ ಅವರು ಹೋಗುತ್ತಿದ್ದರು. ಆ ವೇಳೆ ಆ ಸ್ತ್ರೀಯರ ಭಾವನೆಗಳೇನು ಎಂಬುದು ಪರಿಗಣನೆಗೆ ಬರುವುದಿಲ್ಲ. ರಾಮಾಯಣದಲ್ಲಿ ಶಿವಧನುಸ್ಸನ್ನು ಮುರಿಯಬೇಕೆಂಬ ಪಣ, ಮಹಾಭಾರತದಲ್ಲಿ ಮತ್ಸéದ ಕಣ್ಣಿಗೆ ಗುರಿಯಿಟ್ಟು ಬಾಣ ಬಿಡಬೇಕೆನ್ನುವ ಪಣ, ಇವೆಲ್ಲ ಮೇಲಿನ ವರ್ಗದಲ್ಲೇ ಬರುತ್ತವೆ. ಇಲ್ಲಿ ಸ್ವಯಂವರ ಎಂಬ ಇನ್ನೊಂದು ಪರಿಕಲ್ಪನೆಯೂ ಇದೆ. ರಾಜಕುಮಾರಿ ತನಗೆ ಯಾರು ಮೆಚ್ಚುಗೆಯಾಗುತ್ತಾರೋ, ಅವರ ಕೊರಳಿಗೆ ಹಾರ ಹಾಕುವುದು. ನಳ-ದಮಯಂತಿಯರ ವಿವಾಹವಾಗಿದ್ದು ಹೀಗೆ. ಗಾಂಧರ್ವ ಪದ್ಧತಿಯ ವಿವಾಹ ಅಂದರೆ ಪ್ರೇಮ ವಿವಾಹಕ್ಕೂ ಅವಕಾಶವಿದೆ. ರಾಕ್ಷಸ ವಿವಾಹವೂ ಇತ್ತು. ಅಂದರೆ, ರಹಸ್ಯವಾಗಿ ಅಪಹರಿಸಿ, ಬಲಾತ್ಕಾರಿಂದ ಮದುವೆಯಾಗುವುದು.
ಇದರಲ್ಲೆಲ್ಲ ಸ್ವಯಂವರ ಅತಿಹೆಚ್ಚು ಬಳಕೆಯಲ್ಲಿತ್ತು. ಬಲಪ್ರಯೋಗ ನಡೆಯುವುದು ಆಗಾಗ ನಡೆಯುತ್ತಿದ್ದ ಸಮಾಚಾರ. ಇಂತಹದ್ದೇ ಒಂದು ಬಲಪ್ರಯೋಗ ಭೀಷ್ಮ ಮಾಡುತ್ತಾನೆ. ಅದೂ ಕಾಶೀರಾಜ ಸ್ವಯಂವರದ ಘೋಷಣೆ ಮಾಡಿದ ನಂತರ. ಪರಂಪರೆ ಪ್ರಕಾರ, ಕುರುವಂಶ-ಕಾಶೀವಂಶದ ನಡುವೆ ಕೊಟ್ಟು ತರುವುದು ವಾಡಿಕೆಯಾಗಿತ್ತು. ಆ ನಿಯಮವನ್ನು ಅನಿರೀಕ್ಷಿತವಾಗಿ ಕಾಶೀರಾಜ ಮುರಿದಾಗ ಭೀಷ್ಮನಿಗೆ ಅವಮಾನವೆನಿಸುತ್ತದೆ. ಆಗ ಯುದ್ಧ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ಈ ಹೊತ್ತಿನಲ್ಲಿ ಭೀಷ್ಮ ಮೂವರು ಯುವತಿಯರ ಮನಸ್ಸಿನಲ್ಲೇನಿತ್ತು ಎಂದು ಕೇಳಲು ಹೋಗುವುದಿಲ್ಲ. ಬಹುಶಃ ಆ ಗಡಿಬಿಡಿಯಲ್ಲಿ ಈ ಯುವರಾಣಿಯರೂ ಅದನ್ನು ಹೇಳುವುದಿಲ್ಲ. ಅವರು ಹಸ್ತಿನಾಪುರದ ಅರಮನೆ ಪ್ರವೇಶಿಸಿದಾಗಲೇ ಎಡವಟ್ಟಾಗಿದ್ದು. ಅಂಬೆ ಬಾಯ್ಬಿಟ್ಟು ನಾನು ಶಾಲ್ವನನ್ನು ಪ್ರೀತಿಸುತ್ತೇನೆ, ನೀನು ದಾಳಿ ಮಾಡುವಾಗ ನಾನು ಅವನ ಕೊರಳಿಗೆ ಹಾರ ಹಾಕಲು ಹೋಗಿದ್ದೆ ಎಂದು ಹೇಳಿಬಿಡುತ್ತಾಳೆ.
ಇಲ್ಲಿಂದ ಶುರುವಾಗುವುದು ರಗಳೆ. ಇತ್ತ ಶಾಲ್ವನೂ ಆಕೆಯನ್ನು ಮದುವೆಯಾಗಲು ಒಪ್ಪಲಿಲ್ಲ. ವಿಚಿತ್ರವೀರ್ಯನೂ ಒಪ್ಪಲಿಲ್ಲ. ಭೀಷ್ಮ ತಾನು ಬ್ರಹ್ಮಚಾರಿಯಾಗಿ ಉಳಿಯುವೆ ಎಂಬ ಪ್ರತಿಜ್ಞೆ ಮುರಿಯುವುದಿಲ್ಲ ಎಂದು ಅಂಬೆಗೆ ನಯವಾಗಿ ಹೇಳುತ್ತಾನೆ. ಹಾಗಾದರೆ ಭೀಷ್ಮನನ್ನು ಒಪ್ಪಿಸುವುದು ಹೇಗೆ? ಅಂಬೆಯ ಗೋಳನ್ನು ಕೇಳಿ ಭೀಷ್ಮನ ಗುರು ಪರಶುರಾಮರು ಅವನನ್ನು ತಾನು ಒಪ್ಪಿಸುತ್ತೇನೆಂದು ಹೇಳುತ್ತಾರೆ. ಗುರುಗಳ ಕರೆಗೆ ಓಗೊಟ್ಟು ಭೀಷ್ಮರು ಓಡಿ ಬರುತ್ತಾರೆ. ಏನೇ ಅನುನಯಿಸಿದರೂ, ಪ್ರತಿಜ್ಞೆ ಮುರಿಯಲು ಮಾತ್ರ ಒಪ್ಪುವುದಿಲ್ಲ. ಪರಶುರಾಮರು ಸಿಟ್ಟಾಗುತ್ತಾರೆ, ಗುರುವಿನ ಮಾತನ್ನೇ ಮೀರುವುದಾದರೆ ನನ್ನ ಶಾಪವನ್ನು ಅನುಭವಿಸು, ಇಲ್ಲವೇ ಯುದ್ಧಕ್ಕೆ ಸಿದ್ಧನಾಗು ಎನ್ನುತ್ತಾರೆ. ಗುರುವಿನ ಶಾಪಕ್ಕಿಂತ ಯುದ್ಧವೇ ಆಗಲಿಯೆಂದು ಭೀಷ್ಮರು ಹೇಳುತ್ತಾರೆ. ಎಂತಹ ಘೋರಯುದ್ಧ ನಡೆದರೂ ಯಾರೂ ಸೋಲಲಿಲ್ಲ. ಆಗ ಜಗತ್ತನ್ನೇ ನಾಶ ಮಾಡುವ ಅಸ್ತ್ರಬಿಡಲು ಭೀಷ್ಮರು ನಿರ್ಧರಿಸುತ್ತಾರೆ. ಅಲ್ಲಿಗೆ ಯುದ್ಧ ನಿಲ್ಲಿಸಲು ದೇವತೆಗಳು ಮನವಿ ಮಾಡುತ್ತಾರೆ. ಅಂಬೆಗಿದ್ದ ಕೊನೆಯ ಆಶಾಕಿರಣವೂ ಕರಗಿಹೋಗುತ್ತದೆ. ಅವಳು ದುಃಖತಪ್ತಳಾಗಿ ಅಲ್ಲಿಂದ ಹೊರಬೀಳುತ್ತಾಳೆ. ತನ್ನ ಇಡೀ ಜೀವನ ಭೀಷ್ಮನಿಂದ ಹಾಳಾಗಿ ಹೋಯಿತು. ಎಲ್ಲೂ ಆಶ್ರಯವಿಲ್ಲದೇ ಹೋಯಿತಲ್ಲ ಎಂದು ನೊಂದುಕೊಂಡು ಸೇಡು ತೀರಿಸಿಕೊಳ್ಳುವ ತೀರ್ಮಾನ ಮಾಡುತ್ತಾಳೆ.
ಇಲ್ಲಿ ಆಕೆಯ ದಾರುಣ ಪರಿಸ್ಥಿತಿಯನ್ನು ಒಮ್ಮೆ ನಾವು ಅರ್ಥ ಮಾಡಿಕೊಳ್ಳಬೇಕು. ಮನೆಯಿಂದ ಆಕೆ ಹೊರಬಿದ್ದ ಮೇಲೆ, ಅಲ್ಲಿನ ಋಣ ಮುಗಿದಿರುತ್ತದೆ. ಇತ್ತ ವಿಚಿತ್ರವೀರ್ಯನೂ ಇಲ್ಲ, ಅತ್ತ ಶಾಲ್ವನೂ ಇಲ್ಲ. ಭೀಷ್ಮನಂತೂ ಇಲ್ಲವೇ ಇಲ್ಲ. ಕಾಡಿನಲ್ಲಿ ಋಷಿಗಳೂ ತಮ್ಮ ಜೊತೆಗಿದ್ದು, ಆಕೆ ತಪಸ್ಸು ಮಾಡಲು ಒಪ್ಪುವುದಿಲ್ಲ. ಕೆಲವೇ ಸಮಯದ ಹಿಂದೆ ಯುವರಾಣಿಯಾಗಿದ್ದವಳ ಇವತ್ತಿನ ಪಾಡು ನೋಡಿ. ಕ್ಷತ್ರಿಯ ಧರ್ಮ ಏನೇ ಇರಲಿ, ಅವೆಲ್ಲಕ್ಕಿಂತ ದೊಡ್ಡದು ಮನುಷ್ಯತ್ವವಲ್ಲವೇ?
-ನಿರೂಪ