Advertisement

ಕೀಟನಾಶಕವಾಗಿ ಬೇವು

09:33 AM Jun 16, 2019 | mahesh |

ಪುರಾತನ ಕಾಲದಿಂದಲೂ ಆಯುರ್ವೇದೀಯ ಔಷಧ ಮತ್ತು ಸೌಂದರ್ಯ ವರ್ಧಕಗಳಲ್ಲಿ ಬೇವಿನ ಎಲೆ, ಕಡ್ಡಿ, ಬೀಜಗಳನ್ನು ಬಳಸಲಾಗುತ್ತಿತ್ತು. ಬೇವಿನ ಮರದ ಲಾಭ ಮನುಷ್ಯರಿಗೆ ಮಾತ್ರವಲ್ಲ ಕೃಷಿಯಲ್ಲಿ ಕೂಡ ಅತ್ಯಂತ ಉಪಯುಕ್ತ ಎಂದು ಮನಗಂಡು ಕೀಟನಾಶಕಗಳ ರೂಪದಲ್ಲಿ ಬೀಜೋಪಚಾರಕ್ಕಾಗಿ ಮತ್ತು ಭೂಮಿಯ ಫ‌ಲವರ್ಧನೆ ವೃದ್ಧಿಸಿಕೊಳ್ಳಲು ರೈತರಿಂದ ಬಳಸಲಾಗುತ್ತಿದೆ.

Advertisement

ಮನುಷ್ಯ ತನ್ನ ಆರೋಗ್ಯದ ನಿರ್ವಹಣೆಗಾಗಿ ಬೇವಿನ ಮೂಲದ ಔಷಧಗಳ ಮೇಲೆ ಅವಲಂಬಿತನಾಗುತ್ತಿದ್ದಾನೆ. ಇದರ ಎಲೆ ಮತ್ತು ಎಣ್ಣೆಗಳಲ್ಲಿ ಆಝೂರಿರಕ್ತಿನ್‌, ನಿಂಬಿಸಿಡಿನ್‌, ನಿಂಬಿಡಿನ್‌ ಎಂಬ ರಾಸಾಯನಿಕ ಅಂಶಗಳಿವೆ. ಇದರಿಂದಾಗಿ ಸಂಶೋಧನೆಯಲ್ಲಿ 500ಕ್ಕೂ ಹೆಚ್ಚು ಕೀಟಗಳನ್ನು ನಿರ್ವಹಿಸುವ ಕ್ಷಮತೆ ಇದರಲ್ಲಿ ಅಡಗಿದೆ. ಇದನ್ನು ಸಿಂಪಡಿಸಿದಾಗ ಕೀಟದ ರಾಸಾಯನಿಕ ಪ್ರಕ್ರಿಯೆ, ಬೆಳವಣಿಗೆಗೆ ಧಕ್ಕೆ ಬರುತ್ತದೆ. ಕೀಟದ ನಡವಳಿಕೆಯಲ್ಲೂ ತೊಂದರೆ ಉಂಟಾಗುತ್ತದೆ. ಈ ಪ್ರಕ್ರಿಯೆಯಿಂದ ಕೀಟಗಳ ಸಂತತಿ ನಾಶವಾಗುತ್ತದೆ. ಆದ್ದರಿಂದ ಈ ಬೇವಿನ ಎಣ್ಣೆಯ ಬಳಕೆ ಇಂದು ಅತ್ಯಂತ ಪ್ರಾಮುಖ್ಯತೆ ಪಡೆದಿದೆ.

ಕೀಟಗಳ ಉಸಿರಾಟಕ್ಕೆ ತೊಂದರೆ
ರಾಸಾಯನಿಕ ಕೀಟನಾಶಕ ಬಳಸಿದಾಗ ಕೀಟಗಳು ತತ್‌ಕ್ಷಣ ಸಾಯುತ್ತವೆ. ಆದರೆ ಈ ಬೇವಿನ ಮೂಲದ ಕೀಟನಾಶಕಗಳನ್ನು ಉಪಯೋಗಿಸಿದಾಗ ಕೀಟ ಕೂಡಲೇ ಸಾಯುವುದಿಲ್ಲ. ಕಾಲಕ್ರಮೇಣ ಅದರ ಸಂತತಿ ಕಡಿಮೆಯಾಗುತ್ತದೆ. ಬೆಳೆಗಳ ಮೇಲೆ ಇದನ್ನು ಸಿಂಪಡಿಸಿದಾಗ ಕೀಟಗಳು ಅಂತಹ ಎಲೆಯಿಂದ ರಸವನ್ನು ಹೀರಿದಾಗ ಬೇವಿನ ಎಣ್ಣೆ ಆ ಕೀಟಗಳ ದೇಹದಲ್ಲಿ ಪ್ರವೇಶವಾಗಿ ಇದರ ರಾಸಾಯನಿಕ ಪ್ರಕ್ರಿಯೆ ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ.

ದುಷ್ಪರಿಣಾಮ ಕಡಿಮೆ
ಪ್ರಕೃತಿಯಲ್ಲಿ ಅನೇಕ ಸೂಕ್ಷ್ಮಜೀವಿಗಳು, ಮನುಷ್ಯನಿಗೆ ಉಪಯೋಗಕರವಾದ ಕೀಟಗಳು ಇವೆ. ಅದೇ ರೀತಿ ಉತ್ತಮ ರೀತಿಯಲ್ಲಿ ವಿಕಾಸವಾಗಿರಬಹುದಾದ ಪ್ರಾಣಿಗಳೂ ಇವೆ. ಇವುಗಳಲ್ಲಿ ಇರುವ ಸಂಬಂಧವನ್ನು ಕಾಪಾಡಲು ನಾವು ಸಾವಯವಯುಕ್ತ ಅಂದರೆ ಬೇವಿನ ಮೂಲದ ಕೀಟನಾಶಕಗಳು ಅಥವಾ ಬೇವಿನ ಹಿಂಡಿಯನ್ನು ಬಳಸುವುದು ಉತ್ತಮ. ಏಕೆಂದರೆ ರಾಸಾಯನಿಕ ಕೀಟನಾಶಕಗಳ ಯಥೇಚ್ಛ ಬಳಕೆಯಿಂದ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ಉಂಟು ಮಾಡುತ್ತವೆ. ಆದರೆ ಬೇವಿನ ಮೂಲದ ಎಣ್ಣೆ ಸಿಂಪಡಣೆಯಿಂದ ಆ ತರಹದ ದುಷ್ಪರಿಣಾಮ ಇರುವುದಿಲ್ಲ. ರಾಸಾಯನಿಕ ಕೀಟನಾಶಕಗಳಿಂದ ಹಣ್ಣು, ತರಕಾರಿಗಳಲ್ಲಿ ವಿಷ ವಸ್ತು ಹಾಗೆಯೇ ಉಳಿಯುತ್ತವೆ.
ಸುಲಭವಾಗಿ ವಿಭಜನೆಯಾಗುತ್ತದೆ
ಬೇವಿನ ಹಿಂಡಿಯನ್ನು ಚೆನ್ನಾಗಿ ಪುಡಿ ಮಾಡಿ ಅನಂತರ ಬಳಸಬೇಕು. ಇದು ಭೂಮಿಯಲ್ಲಿ ಸಮನಾಗಿ ಹರಡುವುದಕ್ಕೆ ಹಾಗೂ ಸೂಕ್ಷ್ಮಾಣುಜೀವಿಗಳಿಂದ ಸುಲಭವಾಗಿ ವಿಭಜನೆಯಾಗಲು ಸಹಾಯಕವಾಗುತ್ತದೆ. ಇದನ್ನು ಬಿತ್ತನೆಗೆ ಕೆಲವು ದಿನಗಳ ಮುಂಚಿತವಾಗಿ ಅಥವಾ ಬಿತ್ತನೆ ಸಮಯದಲ್ಲೂ ಬಳಸಬಹುದು. ಬೆಳೆಗಳಿಗೆ ಅನುಗುಣವಾಗಿ ಹಿಂಡಿಗಳನ್ನು ಎರಚುವ ಕೂರಿಗೆ ಮೂಲಕ ಅಥವಾ ಸಸ್ಯಗಳ ಎರಡು ಇಕ್ಕೆಲಗಳಲ್ಲಿ ಮಣ್ಣನ್ನು ಬಿತ್ತರಿಸುವಾಗ ಬೇರಿನ ಸಮೀಪವೂ ಇರಿಸಬಹುದು. ಹಿಂಡಿಗಳು ನೀರಿನಲ್ಲಿ ಕರಗದ ವಸ್ತುವಾಗಿದ್ದರೂ ಇದನ್ನು ಬಳಸಿದ 7ರಿಂದ 10 ದಿನಗಳ ಒಳಗಾಗಿ ಸಸ್ಯಗಳಿಗೆ ಸಾರಜನಕ ಶೀಘ್ರ ಲಭ್ಯವಾಗುವ ರೀತಿ ಮಾಡುತ್ತದೆ. ಇವುಗಳು ಒಣ ಮಣ್ಣು, ಒಣ ಹವಾಮಾನಕ್ಕಿಂತ ಹೆಚ್ಚು ತೇವಭರಿತ ಹಾಗೂ ಆದ್ರರ್ ಹವಾಮಾನದಲ್ಲಿ ಬಹಳ ಪರಿಣಾಮಕಾರಿ.
ರಫ್ತು ಹೆಚ್ಚಳ
ಪರಿಸರ ಸ್ನೇಹಿ ಬೇವಿನ ಮೂಲದ ಕೀಟನಾಶಕ ಬಳಸುವುದರಿಂದ ಕೆಲವು ಉತ್ಪನ್ನಗಳಾದ ಹಣ್ಣು, ತರಕಾರಿಗಳಲ್ಲಿ ಅದರ ಅಂಶ ಉಳಿಯುವುದಿಲ್ಲ. ಇದರಿಂದ ವಿದೇಶಗಳಿಗೆ ರಫ್ತಿನ ಅವಕಾಶ ಕೂಡ ಹೆಚ್ಚು.

ಬೇವಿನ ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿ ಕೃಷಿಯಲ್ಲಿ ಬಳಸಲು ಬಹಳ ಉಪಯುಕ್ತ. ಇದರಲ್ಲಿ ಸಾರಜನಕ ಶೇ. 5.1, ರಂಜಕ ಶೇ. 1 ಮತ್ತು ಪೊಟ್ಯಾಶ್‌ ಶೇ. 1.4ರಷ್ಟು ಇದ್ದು ಇದು ಪ್ರಧಾನ ಪೋಷಕಾಂಶಗಳ ಜತೆಗೆ ಸಾಕಷ್ಟು ಲಘು ಪೋಷಕಾಂಶಗಳು ಲಭ್ಯವಾಗುವುದರಿಂದ ಭೂಮಿಗೆ ಇದನ್ನು ಸೇರಿಸುವ ಮೂಲಕ ಮಣ್ಣಿನ ಆರೋಗ್ಯ ವೃದ್ಧಿಸಿ ಫ‌ಲವತ್ತತೆ ಹೆಚ್ಚಿ ಉತ್ಪಾದನಾ ಕ್ಷಮತೆ ಮತ್ತು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಬಹುದಾಗಿದೆ.

ರೈತರು ಒಟ್ಟಾರೆ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಭೂಮಿಯ ಫ‌ಲವತ್ತತೆ, ಹೆಚ್ಚಿನ ಇಳುವರಿ ಪಡೆಯಲು ಯಥೇಚ್ಛವಾಗಿ ಬೇವಿನ ಎಣ್ಣೆ ಮತ್ತು ಹಿಂಡಿಯನ್ನು ಬಳಸುವುದು ಉತ್ತಮ.

Advertisement

– ಜಯಾನಂದ ಅಮೀನ್‌ ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next