ಬೆಂಗಳೂರು: ಕರ್ನಾಟಕ ರಣಜಿ ಕ್ರಿಕೆಟ್‌ನ ಮಾಜಿ ಆಟಗಾರ ಎಸ್. ಅರವಿಂದ ಬೈಕ್ ಸೇರಿ ಇನ್ನಿತರೆ 20 ಬೈಕ್‌ಗಳನ್ನು ಕಳವು ಮಾಡಿದ್ದ ಆಂಧ್ರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶವಂತಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಬ್ದುಲ್ ವಾಹೀದ್ (21) ಅಬ್ರಾರ್ (21) ಬಂಧಿತರು. ಕೆಲದಿನಗಳ ಹಿಂದೆ ಮತ್ತಿಕೆರೆಯ ಈಶ್ವರ ದೇಗುಲದ ಸಮೀಪ
ನಡೆದುಕೊಂಡು ಹೋಗುತ್ತಿದ್ದ ಗೀತಾ ಎಂಬುವವರ ಬಳಿ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕ್ರಿಕೆಟಿಗ ಅರವಿಂದ್ ಬೈಕ್ ಇನ್ನಿತರೆ 20 ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಚಿತ್ತೂರು ಮೂಲದ ಅಬ್ದುಲ್ ವಾಹೀದ್ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಅಬ್ರಾರ್ ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಆರ್.ಟಿ.ನಗರ ನಿವಾಸಿ. ಆರು ತಿಂಗಳ ಹಿಂದೆ ಮನೆ ಮುಂದೆ, ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಆರೋಪಿಗಳು, ಅದೇ ಬೈಕ್‌ಗಳನ್ನು ಚಿತ್ತೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪರಿಚಯಸ್ಥರಿಗೆ 25ರಿಂದ 30 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸರಕಳವು ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರು ತಿಂಗಳ ಹಿಂದೆ ಕ್ರಿಕೆಟಿಗ ಅರವಿಂದ್ ಅವರು ಮತ್ತಿಕೆರೆಯ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಮಾಡಿದ್ದನ್ನು ಒಪ್ಪಿಕೊಂಡರು. ಜತೆಗೆ, ಯಶವಂತಪುರ ಪೊಲೀಸ್ ಠಾಣೆಯಲ್ಲಿ ನಡೆದ 16, ಆರ್.ಟಿ ನಗರ ಠಾಣೆಯ 2 ಬೈಕ್ ಕಳ್ಳತನ ಸೇರಿ 10 ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ ಮೂರು ರಾಯಲ್ ಎನ್‌ಫೀಲ್ಡ್ ಸೇರಿ 25 ಲಕ್ಷ ರೂ. ಮೌಲ್ಯದ ವಿವಿಧ ಮಾದರಿಯ 20 ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.