ಹೊಸದಿಲ್ಲಿ: ದಿಲ್ಲಿಯಲ್ಲಿ ಮೂರನೇ ಬಾರಿ ಅಮ್‌ಆದ್ಮಿ ಸರಕಾರ ರಚಿಸಿದೆ. ಭಾರೀ ಬಹುಮತದಿಂದ ಅರವಿಂದ್ ಕ್ರೇಜಿವಾಲ್ ನೇತೃತ್ವ ಸರಕಾರ ಮತ್ತೂಂದು ಅವಧಿಗೆ ದಿಲ್ಲಿ ಗದ್ದುಗೆ ಪಡೆದುಕೊಂಡಿದೆ. ಸತತವಾಗಿ ಕೇಂದ್ರ ಸರಕಾರದೊಂದಿಗೆ ಹೋರಾಡುತ್ತಲೇ ಬಂದಿರುವ ಕ್ರೇಜಿವಾಲ್ ಈ ಬಾರಿ ಮೆದುವಾಗುವ ಸಾಧ್ಯತೆ ಕಂಡುಬಂದಿವೆ.
ಅಧಿಕಾರ ಹಂಚಿಕೆ ಮತ್ತು ಕೇಂದ್ರದ ಹಸ್ತಕ್ಷೇಪದಕ ಕುರಿತು ಬಹಿರಂಗವಾಗಿಯೇ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಕಟುಮಾತುಗಳಿಂದ ಪಕ್ಷ ಟೀಕಿಸುತ್ತಲೇ ಬಂದಿತ್ತು. ಆದರೆ ಈ ಬಾರಿ ಅಧಿಕಾರ ಸ್ವೀಕರಿಸಿದ ಬಳಿಕ ಹಳೆಯದ್ದನ್ನೆಲ್ಲಾ ಮರೆತು ಅಭಿವೃದ್ಧಿಗಾಗಿ ಒಂದಾಗುವ ಸಂದೇಶವನ್ನು ರವಾನಿಸಿದ್ದಾರೆ.
ಈ ನಿಟ್ಟಿನಲ್ಲಿ ಇಂದು (ಬುಧವಾರ) ಕೇಂದ್ರದ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಗೃಹ ಸಚಿವಾಲಯದ ಬಳಿ ಸಮಯ ಕೇಳಿದ್ದಾರೆ. ಇಂದು ಸಂಜೆಯೊಳಗೆ ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದು ಈ ಎರಡು ನಾಯಕರ ನಡುವಿನ ಮೊದಲ ಭೇಟಿಯಾಗಿದೆ. ಈ ತನಕ ಹಾವು ಮುಂಗುಸಿಯಂತೆ ಕಿತ್ತಾಡುತ್ತಾ ಬಂದಿರುವ ಈ ಉಭಯ ನಾಯಕರು ಭೇಟಿಯಾಗುತ್ತಿದ್ದು, ಕುತೂಹಲ ಕೆರಳಿಸಿದೆ.
ಕೇಂದ್ರಾಡಳಿತ ಪ್ರದೇಶಗಳ ಮೇಲೆ ಕೇಂದ್ರ ಗೃಹ ಸಚಿವಾಲಯ ನೇರ ನಿಯಂತ್ರಣ ಹೊಂದಿರುತ್ತದೆ. ಅಲ್ಲಿನ ಆಡಳಿತ ಮಾತ್ರ ಪ್ರಾದೇಶಿಕ ಸರಕಾರಕ್ಕೆ ನೀಡಲಾಗಿದ್ದರೂ, ಕಾನೂನು ಸುವ್ಯವಸ್ಥೆ ರಕ್ಷಣೆ ಮೊದಲಾದ ಪ್ರಮುಖ ಅಂಶಗಳು ಕೇಂದ್ರ ಗೃಹಸಚಿವಾಲಯದ ಆಧೀನಕ್ಕೆ ಒಳಪಡುತ್ತವೆ. ಇನ್ನು ದಿಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾದ ವಾಯು ಮಾಲಿನ್ಯ, ಟ್ರಾಫಿಕ್ ಮೊದಲಾದವುಗಳನ್ನು ಬಗೆಹರಿಸಲು ಕೇಂದ್ರ ನೆರವನ್ನು ಕೇಳುವ ಸಾಧ್ಯತೆ ಇದೆ. ಈ ಎಲ್ಲಾ ಅಂಶಗಳು ಈ ಭೇಟಿಯ ವೇಳೆ ಚರ್ಚೆಯಾಗುವ ಸಾಧ್ಯತೆ ಇದೆ.