ಹೊಸದಿಲ್ಲಿ: ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನವನ್ನು ವಿರೋಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಸೋಡಿಯಾ ಅವರನ್ನು ‘ಸಂತ ಮತ್ತು ಮಹಾನ್ ಚೇತನ’ ಎಂದು ಬಣ್ಣಿಸಿರುವ ಕೇಜ್ರಿವಾಲ್, ಜೈಲಿಗೆ ಹಾಕಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು ಮತ್ತು ಬಡವರ ಶಾಪವನ್ನು ಎದುರಿಸಲಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರ ಛತ್ತೀಸ್ ಗಢದ ರಾಜಧಾನಿ ರಾಯ್ಪುರದ ಹೊರವಲಯದಲ್ಲಿರುವ ಜೋರಾ ಮೈದಾನದಲ್ಲಿ ಆಪ್ ಕಾರ್ಯಕರ್ತರ ರ್ಯಾಲಿಯನ್ನುದ್ದೇಶಿಸಿ ಕೇಜ್ರಿವಾಲ್ ಈ ಹೇಳಿಕೆಗಳನ್ನು ನೀಡಿದರು.
ವಿರೋಧ ಪಕ್ಷಗಳನ್ನು ಒಡೆಯಲು ಪ್ರಧಾನಿ ಮೋದಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಬಿಜೆಪಿಯೇತರ ಸರ್ಕಾರವು ರಾಜ್ಯಗಳಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ದೇಶದ ಪ್ರಧಾನ ಮಂತ್ರಿ ರಾಷ್ಟ್ರಕ್ಕೆ ‘ಪಿತಾಮಹ’ ಆಗಿರಬೇಕು. ಬಿಜೆಪಿಯೇತರ ಪಕ್ಷಗಳಲ್ಲಿ ಬಿರುಕು ಮೂಡಿಸುವುದು ಮತ್ತು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ರಾಜ್ಯಗಳಲ್ಲಿ ಅವರ ಸರ್ಕಾರಗಳನ್ನು ಉರುಳಿಸುವುದು ಪ್ರಧಾನಿ ಮೋದಿಯವರ ‘ಕಾರ್ಯಶೈಲಿ’ ಆಗಿದೆ ಎಂದು ಅವರು ಆರೋಪಿಸಿದರು.
Related Articles
‘ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷ ಅಧಿಕಾರಕ್ಕೆ ಬಂದರೆ ಯಾವುದೇ ಪರಿಸ್ಥಿತಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ನಮ್ಮ ದೇಶದ ಪ್ರಧಾನಿ ನಿರ್ಧರಿಸಿದ್ದಾರೆ. ಅದಕ್ಕೆ ಅವರು ಆ ಪಕ್ಷದ ಎಲ್ಲಾ ನಾಯಕರ ವಿರುದ್ಧ ಸಿಬಿಐ ಮತ್ತು ಇಡಿಯನ್ನು ಬಿಡುತ್ತಾರೆ. ಅವರಿಗೆ ಹಲವು ರೀತಿಯಲ್ಲಿ ಕಿರುಕುಳ ನೀಡಲಾಗುತ್ತದೆ” ಎಂದು ಕೇಜ್ರಿವಾಲ್ ತಿಳಿಸಿದರು.