ಹೊಸದಿಲ್ಲಿ : ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
‘ಬಿಜೆಪಿಯ ಹಾಲಿ ನಾಯಕತ್ವವು ಅಧಿಕಾರ ಹಿಡಿಯುವ ಒಂದು ವೇದಿಕೆಯಾಗಿ ಬಿಟ್ಟಿದೆ; ಮಾಜಿ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ತತ್ವಾದರ್ಶಗಳನ್ನು ಬಿಜೆಪಿ ಪಾಲಿಸುತ್ತಿಲ್ಲ’ ಎಂದು ಆರೋಪಿಸಿರುವ ಅಪಾಂಗ್ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗೆ ಕಳುಹಿಸಿದ್ದಾರೆ.
‘ದಿವಂಗತ ವಾಜಪೇಯಿ ಅವರು ಪ್ರಾಯಶಃ ನಮ್ಮ ದೇಶ ನೀಡಿರುವ ಓರ್ವ ಅತೀ ದೊಡ್ಡ ಪ್ರಜಾಪ್ರಭುತ್ವವಾದಿ. ಅವರು ಅನೇಕ ಬಾರಿ ನನಗೆ ರಾಜ ಧರ್ಮದ ಚಿನ್ನದ ನಿಯಮಗಳನ್ನು ಬೋಧಿಸಿದ್ದಾರೆ. ಇಂದಿಗೂ ವಾಜಪೇಯಿ ಜೀ ಅವರ ತತ್ವ ಸಿದ್ಧಾಂತಗಳ ಓರ್ವ ವಿದ್ಯಾರ್ಥಿಯಾಗಿರುವ ನಾನು ಅವರ ರಾಜಧರ್ಮ ವನ್ನು ಕಾಯಾ, ವಾಚಾ, ಮನಸಾ ಪಾಲಿಸಲು ಯತ್ನಿಸುತ್ತಿದ್ದೇನೆ’ ಎಂದು ಅಪಾಂಗ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
“ಇಂದು ದುರದೃಷ್ಟವಶಾತ್ ಬಿಜೆಪಿ ಅಧಿಕಾರ ಗ್ರಹಣದ ಒಂದು ವೇದಿಕೆಯಾಗಿ ಬಿಟ್ಟಿದೆ. ಇದರ ನಾಯಕತ್ವ ಪ್ರಜಾಸತ್ತಾತ್ಮಕ ನಿರ್ಧಾರಗಳ ವಿಕೇಂದ್ರೀಕರಣವನ್ನು ದ್ವೇಷಿಸುತ್ತದೆ; ಅದೀಗ ಕೇವಲ ಅಧಿಕಾರವನ್ನು ವಶಪಡಿಸಿಕೊಳ್ಳುವುದರಲ್ಲಿ ಮಾತ್ರವೇ ಆಸಕ್ತವಾಗಿದೆ’ ಎಂದು ಅಪಾಂಗ್ ಹೇಳಿದ್ದಾರೆ.
‘2014ರ ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸದಿದ್ದರೂ ಪಕ್ಷದ ನಾಯಕತ್ವ ಅಧಿಕಾರ ಗ್ರಹಣಕ್ಕೆ ಅತ್ಯಂತ ಕೊಳಕು ಮಾರ್ಗಗಳನ್ನು ಅನುಸರಿಸಿ ದಿವಂಗತ ಕಾಲಿಖೋ ಪುಲ್ ಅವರನ್ನು ಸಿಎಂ ಆಗಿ ಕೂರಿಸಿತು’ ಎಂದು ಅಪಾಂಗ್ ಪತ್ರದಲ್ಲಿ ಹೇಳಿದ್ದಾರೆ.