Advertisement

ಅರುಣ್‌ ಸಿಂಗ್‌ ರಾಜ್ಯ ಪ್ರವಾಸ : ಸಂಪುಟಕ್ಕೆ ಪುನಾರಚನೆ ಸರ್ಜರಿ?

02:46 AM Jun 17, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬೆನ್ನಿಗೆ ನಿಂತಿದ್ದಾರೆ. ಆದರೆ ಸದ್ಯದಲ್ಲೇ ಸಂಪುಟ ಪುನಾರಚನೆ ಕುರಿತಂತೆ ಸಚಿವರಿಗೆ ಸುಳಿವನ್ನೂ ಕೊಟ್ಟಿದ್ದಾರೆ.

Advertisement

ಅರುಣ್‌ ಸಿಂಗ್‌ ಇತ್ತೀಚೆಗಷ್ಟೇ ದಿಲ್ಲಿಯಲ್ಲಿಯೂ ಬಿಎಸ್‌ವೈ ಸ್ಥಾನ ಚ್ಯುತಿ ಪ್ರಶ್ನೆಯೇ ಇಲ್ಲ ಎಂದಿದ್ದರು. ಈಗ ಪುನರುಚ್ಚರಿಸುವ ಮೂಲಕ ಬಂಡಾಯದ ಸೂಚನೆ ನೀಡುವ ನಾಯಕರಿಗೆ ನೇರ ಸಂದೇಶ ರವಾನಿಸಿದ್ದಾರೆ.

ಸುದೀರ್ಘ‌ ಚರ್ಚೆ
ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಅರುಣ್‌ ಸಿಂಗ್‌ ಮೊದಲ ದಿನ ಪಕ್ಷದ ಕಚೇರಿಯಲ್ಲಿ ಸಚಿವರೊಂದಿಗೆ ಸುದೀರ್ಘ‌ ಸಭೆ ನಡೆಸಿದರು. ಪ್ರಮುಖವಾಗಿ ಕೊರೊನಾ ನಿರ್ವಹಣೆಯಲ್ಲಿ ಕೈಗೊಂಡ ಕ್ರಮಗಳ ಕುರಿತು ಸಚಿವರಿಂದ ವಿವರಣೆ ಪಡೆದುಕೊಂಡರು.

ಸಚಿವರಿಗೆ ಸೂಚನೆ
ಸುಮಾರು 2 ಗಂಟೆ ಕಾಲ ಸಭೆ ನಡೆಯಿತು. ಕೆಲವು ಸಚಿವರು ತಮ್ಮ ಇಲಾಖೆಯಲ್ಲಿ ಜಾರಿಗೆ ತಂದಿರುವ ಮಹತ್ವದ ಯೋಜನೆಗಳ ಮಾಹಿತಿ ನೀಡಿದರು. ಸಚಿವರಿಗೆ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಹಾಗೂ ತಮ್ಮ ಇಲಾಖೆಗೆ ಸಂಬಂಧಿಸಿದ ವಿಚಾರದಲ್ಲಿ ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವಂತೆ ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವರು ಪ್ರತೀ ಗುರುವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿದ್ದು ಜನಸಾಮಾನ್ಯರು ಮತ್ತು ಶಾಸಕರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

Advertisement

ಯೋಜನೆ ತಲುಪಿಸಿ
ಸಚಿವರು ತಮ್ಮ ಇಲಾಖೆಗಳಲ್ಲಿ ಜಾರಿಗೆ ತಂದಿ ರುವ ಪ್ರಮುಖ ಯೋಜನೆಗಳನ್ನು ಪಕ್ಷದ ಕಾರ್ಯಕರ್ತರ ಮೂಲಕ ಜನರಿಗೆ ತಲುಪಿಸ ಬೇಕು. ನೈಜ ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಆ ಬಗ್ಗೆ ಹೆಚ್ಚಿನ ಪ್ರಚಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.

ಈ ಮೂಲಕ ರಾಜ್ಯದಲ್ಲಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಗೆ ಪಕ್ಷವನ್ನು ಸಿದ್ಧಪಡಿಸಬೇಕು ಎಂದು ಸಚಿವರಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಸಾಧನೆ ಬಗ್ಗೆ ಮಾತ್ರ ತಿಳಿಸಿ
ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾಯಕತ್ವದ ಬಗ್ಗೆ ಮತ್ತು ಪಕ್ಷದ ವಿಚಾರದಲ್ಲಿ ಸಚಿವರು ಯಾವುದೇ ರೀತಿಯ ಹೇಳಿಕೆಗಳನ್ನು ನೀಡುವಂತಿಲ್ಲ. ತಮ್ಮ ಇಲಾಖೆ ಹಾಗೂ ಸರಕಾರದ ಸಾಧನೆಗಳ ಬಗ್ಗೆ ಮಾತ್ರ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಬೇಕು ಎಂದು ಅರುಣ್‌ ಸಿಂಗ್‌ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಒಬ್ಬರೇ ಬಂದರು
ಅರುಣ್‌ ಸಿಂಗ್‌ ಆಗಮನದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದೊಳಗೆ ವ್ಯಾಪಕವಾಗಿ ಚರ್ಚೆ ನಡೆದಿತ್ತು. ಅವರ ಜತೆ ಬೇರೊಬ್ಬ ನಾಯಕರನ್ನು ಕಳುಹಿಸಿ ತಮ್ಮ ಅಹವಾಲುಗಳನ್ನು ಕೇಳಬೇಕೆಂದು ಯಡಿಯೂರಪ್ಪ ವಿರುದ್ಧ ಬಣದ ನಾಯಕರು ಹೈಕಮಾಂಡ್‌ಗೆ ಕೇಳಿಕೊಂಡಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ದಿಲ್ಲಿ ವರಿಷ್ಠರು ಸಿಂಗ್‌ ಒಬ್ಬರನ್ನೇ ಕಳುಹಿಸಿದ್ದಾರೆ.

ಡಿವಿಎಸ್‌ ಜತೆ ಮೋದಿ ಚರ್ಚೆ
ರಾಜ್ಯ ರಾಜಕೀಯ ಬೆಳವಣಿಗೆಯ ಕುರಿತು ಸೋಮವಾರ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅನಂತರ ಕೇಂದ್ರ ರಸಾಯನಿಕ ಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅವರೊಂದಿಗೂ ಮೋದಿ ರಾಜ್ಯ ಬಿಜೆಪಿಯ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭೇಟಿ ಬಯಸಿದ 30 ಶಾಸಕರು
ಗುರುವಾರ ಶಾಸಕರ ಭೇಟಿಗೆ ಅರುಣ್‌ ಸಿಂಗ್‌ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಸಚೇತಕ ಸುನಿಲ್‌ ಕುಮಾರ್‌, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್‌, ಅಪ್ಪಚ್ಚು ರಂಜನ್‌ ಸೇರಿದಂತೆ 30ಕ್ಕೂ ಹೆಚ್ಚು ಶಾಸಕರು ಅವಕಾಶ ಕೋರಿದ್ದಾರೆನ್ನಲಾಗಿದೆ. ಯಾವುದೇ ಶಾಸಕರು ಗುಂಪು ಕಟ್ಟಿಕೊಂಡು ಅಭಿಪ್ರಾಯ ಹೇಳಲು ಅವಕಾಶವಿಲ್ಲ ಎಂದು ಅರುಣ್‌ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಯಕತ್ವದ ಗೊಂದಲ ಎಲ್ಲಿ, ಹೇಗೆ ಹುಟ್ಟಿತು ಎಂದು ನನಗೆ ಗೊತ್ತಾಗುತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುತ್ತಾರೆ. ಇದುವರೆಗೆ ಯಾವೊಬ್ಬ ಶಾಸಕನೂ ನಾಯಕತ್ವ ಬದಲಾಗಬೇಕು ಅಂದಿಲ್ಲ.
– ಜಗದೀಶ್‌ ಶೆಟ್ಟರ್‌, ಕೈಗಾರಿಕಾ ಸಚಿವ

ಅರುಣ್‌ ಸಿಂಗ್‌ ಎರಡು ದಿನ ಇಲ್ಲಿಯೇ ಇರಲಿದ್ದಾರೆ. ಮಾತನಾಡುವ ಅಪೇಕ್ಷೆ ಇರುವವರು ಬಂದು ಮಾತನಾಡುತ್ತಾರೆ. ನಾಯಕತ್ವ ಬದಲಾವಣೆ ಚರ್ಚೆ ಇಲ್ಲ. ಯಡಿಯೂರಪ್ಪನವರೇ 2 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ.
– ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next