ವಾಷಿಂಗ್ಟನ್/ನವದೆಹಲಿ: “ಎಚ್-1ಬಿ ವೀಸಾ ನಿಯಂತ್ರಣ ಆದೇಶಕ್ಕೆ ಸಹಿ ಹಾಕಿದ್ದೀರಿ. ಅದು ಭಾರತದಲ್ಲಿರುವ ಅಮೆರಿಕದ ಕಂಪನಿಗಳ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ,’ ಹೀಗೆಂದು ಎಚ್ಚರಿಕೆ ಕೊಟ್ಟದ್ದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಹಾಯಕ ಸಚಿವೆ ನಿರ್ಮಲಾ ಸೀತಾರಾಮನ್.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಸಹಿ ಹಾಕಿದ ಮಾರನೇ ದಿನವೇ ಕೇಂದ್ರದಿಂದ ಖಾರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಭಾರತದಲ್ಲೂ ಅಮೆರಿಕ ಮೂಲದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಗಳಿಸುವ ಲಾಭಾಂಶವು ಅಮೆರಿಕದ ಆರ್ಥಿಕತೆಗೆ ಸೇರುತ್ತಿದೆ ಎಂಬುದನ್ನು ಮರೆಯಬಾರದು.
ವಾಣಿಜ್ಯ ನೀತಿಗಳ ಪುನರ್‌ಪರಿಶೀಲನೆ ಸಂದರ್ಭದಲ್ಲಿ ಅಮೆರಿಕ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅಮೆರಿಕ ಕೈಗೊಳ್ಳುವ ನಿರ್ಧಾರವು ಕೇವಲ ಅಲ್ಲಿರುವ ಭಾರತೀಯರ ಮೇಲಷ್ಟೇ ಬೀರುವುದಿಲ್ಲ. ಭಾರತದಲ್ಲಿ ಹಲವು ವರ್ಷಗಳಿಂದ ಅಮೆರಿಕ ಮೂಲಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. ಜಾಗತಿಕ ಮಟ್ಟ ಸುಲಲಿತ ವ್ಯಾಪಾರ ಸೇವಾ ಸೌಲಭ್ಯಗಳ ಸಂಬಂಧ ಒಡಂಬಡಿಕೆ ಮಾಡಿಕೊಳ್ಳುವಂತೆ ಕೋರಿ ವಿಶ್ವ ವ್ಯಾಪಾರ ಸಂಸ್ಥೆಗೆ (ಡಬ್ಲ್ಯುಟಿಒ) ಪ್ರಸ್ತಾವ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಜೇಟ್ಲಿ ಚರ್ಚೆ: ಈ ನಡುವೆ ಅಮೆರಿಕ ಪ್ರವಾಸದಲ್ಲಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಆದೇಶದ ಬಗ್ಗೆ ಅಮೆರಿಕ ವಾಣಿಜ್ಯ ಸಚಿವ ವಿಲ್ಬರ್ ರೋಸ್ ಜತೆ ಚರ್ಚಿಸಿದ್ದಾರೆ. ಅಮೆರಿಕದ ಆರ್ಥಿಕತೆಯ ಪ್ರಗತಿಗೆ ಭಾರತೀಯರು ನೀಡಿರುವ ಕೊಡುಗೆಗಳ ಕುರಿತೂ ಸಚಿವ ಅವರಿಗೆ ಜೇಟ್ಲಿ ಮನವರಿಕೆ ಮಾಡಿದ್ದಾರೆ. ವೀಸಾ ನೀತಿ ಬಿಗಿಗೊಂಡಿದ್ದರಿಂದ ಭಾರತೀಯ ಐಟಿ ಕಂಪನಿಗಳು ಹಾಗೂ ವೃತ್ತಿಪರರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಸಚಿವ ರೋಸ್‌ಗೆ ಅರಿಕೆ ಮಾಡಿರುವ ಜೇಟ್ಲಿ, ಅಮೆರಿಕದ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತೀಯರ ಪಾತ್ರವನ್ನು ಹಾಗೂ ಅದರಿಂದಾಗಿ ಎರಡೂ ದೇಶಗಳಿಗೆ ಆಗಿರುವ ಅನುಕೂಲತೆಯನ್ನೂ ತಿಳಿಸಿದ್ದು, ಇದು ಮುಂದೆಯೂ ಮುಂದುವರಿಯಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಜತೆಗೆ, ವೀಸಾ ನೀತಿ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅಮೆರಿಕವು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.