ಕಲಬುರಗಿ: ಇಲ್ಲಿನ ಬಹಮನಿ ಕೋಟೆಯಲ್ಲಿ ಮಹತ್ವದ ತೋಪು ಪತ್ತೆಯಾಗಿದ್ದನ್ನು ಸುಮಾರು 30 ವರ್ಷಗಳ ಹಿಂದೆ ಸಂಶೋಧನೆ ಮೂಲಕ ಪತ್ತೆ ಹಚ್ಚಲಾಗಿದ್ದರೂ ಅದು ಮುಳ್ಳಿನ ಗಿಡಗಳಲ್ಲಿ ಮುಚ್ಚಿ ಹೋಗಿತ್ತು. ಈಗ ಮತ್ತೆ ವಿದ್ಯಾರ್ಥಿಗಳ ಸಹಾಯದಿಂದ ಪತ್ತೆ ಹಚ್ಚಿದ್ದೇನೆ ಎಂದು ಡಾ| ಶಂಭುಲಿಂಗ ಎಸ್. ವಾಣಿ ಹೇಳಿದರು.
ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಇನಟೆಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ಬಹಮನಿ ಕೋಟೆ ವೀಕ್ಷಣೆ ಸಮಯದಲ್ಲಿ ಅವರು ಇತಿಹಾಸದ ಕುರಿತು ಮಾಹಿತಿ ನೀಡಿದರು.
ಭಾರತದಲ್ಲಿಯೇ ಮೊಟ್ಟ ಮೊದಲ ಭಾರಿಗೆ ಯುದ್ಧ ಭೂಮಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮದ್ದು ಗುಂಡುಗಳು ಹಾಗೂ ತೋಪುಗಳ ಬಳಕೆ ಜಾರಿಗೆ ತಂದವರು ಬಹಮನಿ ಸುಲ್ತಾನರು. ಪರ್ಶಿಯನ್ ಮೂಲದ ಈ ತಂತ್ರಜ್ಞಾನ ದಕ್ಷಿಣ ಭಾರತದ ಕಲಬುರಗಿಯಲ್ಲಿ ಯಶಸ್ವಿಯಾಗಿ 1365ರಲ್ಲಿ ಬಳಸಲಾಯಿತು. ಅಲ್ಲದೇ ಕೋಟೆ ರಕ್ಷಣೆಗಾಗಿ ಸುಮಾರು 26 ವಿವಿಧ ಆಕಾರದ ತೋಪುಗಳನ್ನು ಅಳವಡಿಸಲಾಗಿತ್ತು.
ಅವುಗಳಲ್ಲಿ ಪ್ರಸ್ತುತ 14 ತೋಪುಗಳನ್ನು ಕೋಟೆಯ ಒಳಗೋಡೆ ಮೇಲೆ ನೋಡಬಹುದು. ಇವುಗಳಲ್ಲಿ ಎರಡು ತೋಪುಗಳು ನಂತರದ ಬಹಮನಿ ಸುಲ್ತಾನರ ಕಾಲದಲ್ಲಿ ನಿರ್ಮಿಸಲಾಗಿವೆ. ಇವು ಏಳು ಅಡಿ ಉದ್ದ, ಒಂದು ಅಡಿ ಎತ್ತರದಿಂದ ಕೂಡಿದ್ದು, ಕೆಂಪುವರ್ಣದಲ್ಲಿ ಕಾಣುತ್ತವೆ. ಇದರ ಮೇಲೆ ಐದು ಹಂತದಲ್ಲಿ ರಚನೆ ಮಾಡಿದ ವೃತ್ತಾಕಾರದ ಹೂಬ್ಬಳಿ ರಚನೆ, ಮುಂಭಾಗದಲ್ಲಿ ಸಮಾನ ಆಕಾರದ ಚಿತ್ರಗಳು, ಅದರ ಹಿಂದಿನ ಭಾಗದಲ್ಲಿ ಎರಡು ಮೀನುಗಳು ವೃತ್ತಾಕಾರದಲ್ಲಿ ತಿರುಗುತ್ತಿರುವ ಚಿತ್ರವಿದೆ. ಇದು ತೋಪಿನ ಬಳಕೆ ಸಂಕೇತವಾಗಿರಬಹುದು ಎಂದು ತಿಳಿಸಿದರು.
ತೋಪಿನ ಹಿಂಭಾಗದಲ್ಲಿ ಎರಡು ಸಾಲುಗಳ ಪರ್ಶಿಯನ್ ಶಾಸನವಿದೆ. ಕಲಬುರಗಿ ಬಹಮನಿಯರ ಕಾಲದಲ್ಲಿ ನಿರ್ಮಿಸಲಾದ ಯಾವುದೇ ತೋಪುಗಳ ಮೇಲೆ ಶಾಸನಗಳು ಕಂಡುಬರುವುದಿಲ್ಲ. ಈ ಶಾಸನ ಕುರಿತು ಪ್ರೊ| ಅಬ್ದುಲ್ ರಬ್ ಮುಖ್ಯಸ್ಥರು ಉರ್ದು ವಿಭಾಗ, ಗು.ವಿ.ಕ. ಹಾಗೂ ಇತರ ಪರ್ಶಿಯನ್ ಭಾಷೆ ಪರಿಣಿತರೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು. ಮೊದಲಿನ ಸಾಲುಗಳ ಕೆಲವು ಅಕ್ಷರಗಳು ಅಸ್ಪಷ್ಟವಾಗಿದ್ದು, ಉಳಿದ ಅಕ್ಷರಗಳಲ್ಲಿ ನವಾಬ್ ರುಕ್ನು ದೌಲಾ ಎಂದು ಹಾಗೂ 1184 ಅ.ಹಿ. (ಕ್ರಿ.ಶ.1770-71) ಎರಡನೇ ಸಾಲಿನಲ್ಲಿ ಮುಜಾಹೀದ್ ಬಹಾದ್ದೂರ ಝಾಫರ್-ಉದ್-ದೌಲಾ ಎಂದು ಬರೆಯಲಾಗಿದೆ ಎನ್ನುವ ಕುರಿತು ಡಾ| ರಬ್ ಮಾಹಿತಿ ನೀಡಿದರು.